ವೀರಾಜಪೇಟೆ, ನ. ೬: ಮೊಗೇರ ಸಮಾಜವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಹಾಗೂ ಹೋಬಳಿ ಮಟ್ಟದಲ್ಲಿ ಮೊಗೇರ ಸಮಿತಿ ರಚಿಸಲಾಗುವುದು ಎಂದು ರಾಜ್ಯ ತುಳು ಅಕಾಡೆಮಿ ಸದಸ್ಯ ಮೊಗೇರ ಸಮಾಜದ ಗೌರವಾಧ್ಯಕ್ಷ ಪಿ.ಎಂ.ರವಿ ಹೇಳಿದರು.
ವೀರಾಜಪೇಟೆ ಪಟ್ಟಣದ ಉಪಾಧ್ಯಾಯರ ಸಂಘದ ಸಭಾಂಗಣದಲ್ಲಿ ನಡೆದ ಮೊಗೇರ ಸಮಾಜದ ತಾಲೂಕು ಸಮಿತಿ ರಚನೆ ಹಾಗೂ ಜನಾಂಗದ ಜನಪ್ರತಿನಿಧಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ೩೮ ಸಾವಿರ ಮೊಗೇರ ಜನಾಂಗದವರಿದ್ದು, ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉನ್ನತ ಹುದ್ದೆಗೇರುವಂತೆ ಮಾಡಬೇಕು ಹಾಗೂ ಜನಾಂಗ ಬಾಂಧÀವರು ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಘದ ಸದಸ್ಯತ್ವ ಪಡೆಯುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ವೀರಾಜಪೇಟೆ ತಾಲೂಕು ಅಧ್ಯಕ್ಷ ಜಿ.ಮೋಹನ್ ವಹಿಸಿದ್ದರು. ಮೊಗೇರ ಸಮಾಜ ಸ್ಥಾಪಕ ಅಧ್ಯಕ್ಷ ಮಾಸ್ಟರ್ ಸದಾಶಿವ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ಒಂದೂವರೆ ವರ್ಷಗಳಿಂದ ಸಂಘದ ಸಭೆ ನಡೆಸಲು ಸಾಧ್ಯವಾಗಲಿಲ್ಲ. ಸಂಘವನ್ನು ಅಭಿವೃದ್ಧಿಗೊಳಿಸಲು ಸಮಾಜ ಬಾಂಧವರು ಸಹಕಾರ ನೀಡಬೇಕು ಎಂದರು. ವೇದಿಕೆಯಲ್ಲಿ ಸಂಘದ ರಾಜ್ಯ ಸಮಿತಿ ಸದಸ್ಯ ಮಂಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜನಾರ್ಧನ, ಸದಸ್ಯ ಪಿ.ಯು.ವಸಂತ, ಮಾಜಿ ಅಧ್ಯಕ್ಷೆ ಅಕ್ಕಮ್ಮ ಮೂರ್ತಿ, ಸೋಮವಾರಪೇಟೆ ಅಧ್ಯಕ್ಷ ದಾಮೋದರ, ಚಟ್ಟಳ್ಳಿ ಗ್ರಾ.ಪಂ. ಸದಸ್ಯ ಮುತ್ತಪ್ಪ ಹಾಗೂ ಇತರರು ಉಪಸ್ಥಿತರಿದ್ದರು. ಕೊನೆಯಲ್ಲಿ ತಾಲೂಕು ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆಯಿತು. ಇದೆ ಸಂದರ್ಭ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ.ಚಂದ್ರು, ವೀರಾಜಪೇಟೆ ಬಳಿಯ ಬೇಟೋಳಿ ಗ್ರಾಮ ಪಂಚಾಯಿತಿ ಸದಸ್ಯೆ ಗೀತಾ, ಸಿದ್ಧಾಪುರ ಗ್ರಾಮ ಪಂಚಾಯಿತಿ ಸದಸ್ಯ ಗುರುವ ಅವರುಗಳಿಗೆ ವೇದಿಕೆ ಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವಿಕರಿಸಿದ ಅಧ್ಯಕ್ಷ ಪಿ.ಕೆ.ಚಂದ್ರು ಅವರು ಮಾತನಾಡಿ ಜನಾಂಗ ಬಾಂಧÀವರು ಸೌಲಭ್ಯ ಪಡೆದುಕೊಂಡು ಸಂಘದ ಮೂಲಕ ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.