ಸೋಮವಾರಪೇಟೆ, ನ. ೭: ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಪುಟ್ಟಪ್ಪ ವೃತ್ತದ ಹೈಮಾಸ್ಟ್ ದೀಪದ ಕೆಳಗೆ ಬಿದ್ದು ಮದ್ಯಪಾನ ಮಾಡಿದ್ದ ಯುವಕ ನೋರ್ವ ದುರ್ಮರಣಕ್ಕೀಡಾಗಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಪಟ್ಟಣದ ಮಹದೇಶ್ವರ ಬ್ಲಾಕ್‌ನ ಹೊಸ ಬಡಾವಣೆ ನಿವಾಸಿ ಲಕ್ಷö್ಮಣ ಹಾಗೂ ಜಯಮ್ಮ ಅವರ ಪುತ್ರ ಎಸ್.ಎಲ್. ಮಂಜುನಾಥ್ (೨೪) ಎಂಬಾತನೇ ಸಾವನ್ನಪ್ಪಿದವನು. ಪೈಂಟಿAಗ್ ಕೆಲಸ ಮಾಡುತ್ತಿದ್ದ ಮಂಜುನಾಥ್ ನಿನ್ನೆ ದಿನ ಎಂದಿನAತೆ ಕೆಲಸಕ್ಕೆ ತೆರಳಿದ್ದು, ರಾತ್ರಿ ಮದ್ಯ ಸೇವಿಸಿದ್ದಾನೆ.

ನಡುರಾತ್ರಿ ೧೨.೩೦ರ ಸುಮಾರಿಗೆ ಪಟ್ಟಣದ ದೇವಾಲಯ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭ ರಾತ್ರಿ ಪಾಳಿಯ ಪೊಲೀಸರು ಎದುರಾಗಿದ್ದು, ಈತನನ್ನು ಸ್ವಲ್ಪ ಗದರಿಸಿ ಮನೆಗೆ ತೆರಳುವಂತೆ ಸೂಚಿಸಿದ್ದಾರೆ.

ದೇವಾಲಯ ರಸ್ತೆಯಿಂದ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತಕ್ಕೆ ಆಗಮಿಸಿದ ಮಂಜುನಾಥ್, ಹೈಮಾಸ್ಟ್ ದೀಪ ಅಳವಡಿಸಿರುವ ಪುಟ್ಟಪ್ಪ ವೃತ್ತದಲ್ಲಿ ಆಯತಪ್ಪಿ ಕೆಳಬಿದ್ದಿದ್ದಾನೆ. ಮಳೆ ಇದ್ದುದರಿಂದ ಸರ್ಕಲ್‌ನಲ್ಲಿ ಮಳೆನೀರು ಶೇಖರಣೆಗೊಂಡಿದ್ದು, ಅಲ್ಪ ಪ್ರಮಾಣದಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತು.

ಹೆಚ್ಚು ಮದ್ಯಪಾನ ಮಾಡಿದ್ದರಿಂದ ಆಯತಪ್ಪಿ ಕೆಳಬಿದ್ದ ಮಂಜುನಾಥ್, ನಂತರ ಮೇಲೆ

(ಮೊದಲ ಪುಟದಿಂದ) ಏಳಲಾರದೇ ಅಲ್ಲೇ ಉಳಿದಿದ್ದಾನೆ. ಇದರಿಂದಾಗಿ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾನೆ ಎನ್ನಲಾಗಿದ್ದು, ಇಂದು ಬೆಳಿಗ್ಗೆ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸಾರ್ವಜನಿಕರು ಪೊಲೀಸ್‌ಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸ್ ಠಾಣಾಧಿಕಾರಿ ಶ್ರೀಧರ್ ಸೇರಿದಂತೆ ಸಿಬ್ಬಂದಿಗಳು, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಉಪಾಧ್ಯಕ್ಷ ಸಂಜೀವ, ಸದಸ್ಯ ಬಿ.ಆರ್. ಮಹೇಶ್ ಅವರುಗಳು ಪರಿಶೀಲನೆ ನಡೆಸಿ, ನಂತರ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಿ, ಮರಣೋತ್ತರ ಪರೀಕ್ಷೆಯ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಪ.ಪA. ಅಧ್ಯಕ್ಷ ಪಿ.ಕೆ. ಚಂದ್ರು, ಸದಸ್ಯರಾದ ಜೀವನ್, ಮಹೇಶ್ ಅವರುಗಳು ಮೃತನ ಅಂತ್ಯಕ್ರಿಯೆಗಾಗಿ ಕುಟುಂಬಕ್ಕೆ ರೂ. ೧೦ ಸಾವಿರ ನೀಡುವ ಮೂಲಕ ಮಾನವೀಯತೆ ಮೆರೆದರು. ಮೃತ ಮಂಜುನಾಥ್‌ನ ಮರಣೋತ್ತರ ಪರೀಕ್ಷೆಯಲ್ಲಿ ಮದ್ಯಪಾನ ಮಾಡಿರುವುದು ದೃಢಪಟ್ಟಿದ್ದು, ತಲೆಯ ಭಾಗದಲ್ಲಿ ಯಾವುದೇ ಪೆಟ್ಟಾಗಿಲ್ಲ. ಕೆಳಬಿದ್ದ ನಂತರ ಮೇಲೆ ಏಳಲಾಗದೇ ಅಲ್ಲೇ ಉಳಿದಿದ್ದರಿಂದ ವಿದ್ಯುತ್ ಪ್ರವಹಿಸಿ ಸಾವು ಸಂಭವಿಸಿರಬಹುದು ಎಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ. ಮೃತ ಮಂಜುನಾಥ್ ತಂದೆ-ತಾಯಿಯನ್ನು ಅಗಲಿದ್ದಾನೆ.ಎಲೆಕ್ಟಿçಕ್ ಕೆಲಸಗಾರನ ಎಡವಟ್ಟಿಗೆ ಹೋಯ್ತೇ ಪ್ರಾಣ?!

ಪುಟ್ಟಪ್ಪ ವೃತ್ತದಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪವನ್ನು ದುರಸ್ತಿ ಪಡಿಸುವ ಸಂದರ್ಭ ಎಲೆಕ್ಟಿçಕ್ ಕೆಲಸಗಾರ ಮಾಡಿದ ಎಡವಟ್ಟಿನಿಂದಾಗಿ ಯುವಕನ ಪ್ರಾಣ ಪಕ್ಷಿ ಹಾರಿದೆ ಎಂಬ ಅಂಶ ಇದೀಗ ಚರ್ಚಿತ ವಿಷಯವಾಗಿದೆ. ದೀಪವನ್ನು ದುರಸ್ತಿಪಡಿಸಿದ ನಂತರ ಕೆಲಸಗಾರನು ಹೈಮಾಸ್ಟ್ ಕಂಬದ ತಳಭಾಗದಲ್ಲಿ ತಂತಿಯನ್ನು ಸುತ್ತಿದ್ದ. ರಾತ್ರಿ ಮಳೆಯೂ ಬೀಳುತ್ತಿತ್ತು. ಆ ತಂತಿಯು ಕಂಬಕ್ಕೆ ತಾಗಿಕೊಂಡಿದ್ದರಿAದ ಸಣ್ಣದಾಗಿ ವಿದ್ಯುತ್ ಪ್ರವಹಿಸುತ್ತಿತ್ತು. ಇದೇ ತಂತಿಯ ಮೇಲೆ ಮಂಜುನಾಥ್ ಕೆಳಮುಖವಾಗಿ ಬಿದ್ದಿದ್ದರಿಂದ ಆತನ ತಲೆ ಕಂಬಕ್ಕೆ ತಾಗಿದ್ದರೆ, ಕೈಗಳು ತಂತಿಯನ್ನು ಸ್ಪರ್ಶಿಸಿತ್ತು. ಹೀಗಾಗಿ ವಿದ್ಯುತ್ ಪ್ರವಹಿಸಿ ಮಂಜುನಾಥ್ ಸಾವಿಗೀಡಾಗಿದ್ದಾನೆ. ಒಂದು ವೇಳೆ ದುರಸ್ತಿ ಕಾರ್ಯ ಮುಗಿದೊಡನೆ ತಂತಿಯನ್ನು ತೆಗೆದಿದ್ದರೆ ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.