ಕುಶಾಲನಗರ, ನ. ೬: ಕುಶಾಲನಗರ ಪಟ್ಟಣದ ಪೆಟ್ರೋಲ್ ಬಂಕ್ ಒಂದರ ಬಳಿ ಹೆದ್ದಾರಿಯಲ್ಲಿ ಕಂಡ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ನಗದು ಹೊಂದಿದ್ದ ಅನಾಥ ಸೂಟ್ ಕೇಸನ್ನು ಸ್ಥಳೀಯ ಯುವಕನೊಬ್ಬ ಪೊಲೀಸರ ಮೂಲಕ ಅದರ ಮಾಲೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಿದ್ದಾರೆ. ಕುಶಾಲನಗರದ ಟಾಟಾ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸೋಮಶೇಖರ್ ಎಂಬ ಯುವಕ ಅಂದಾಜು ೪.೫ ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಮತ್ತು ಅಲ್ಪ ಪ್ರಮಾಣದ ನಗದನ್ನು ಪೊಲೀಸರ ಮೂಲಕ ಮಾಲೀಕರ ಕೈ ಸೇರಿಸಿದ್ದು ಯುವಕನ ಪ್ರಾಮಾಣಿಕತೆ ಬಗ್ಗೆ ಶ್ಲಾಘನೆ ವ್ಯಕ್ತಗೊಂಡಿದೆ.

ಘಟನೆ ವಿವರ : ಗುರುವಾರ ರಾತ್ರಿ ಸುಮಾರು ೯.೩೦ ಕ್ಕೆ ಕುಶಾಲನಗರ ಟಾಟಾ ಪೆಟ್ರೋಲ್ ಬಂಕ್ ಬಳಿ ಹೆದ್ದಾರಿ ರಸ್ತೆಯಲ್ಲಿ ಕಪ್ಪು ಸೂಟ್ ಕೇಸ್ ಒಂದನ್ನು ಕಂಡ ಸೋಮಶೇಖರ್ ತಕ್ಷಣ ಕುಶಾಲನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಸೂಟ್ ಕೇಸ್ ಅನ್ನು ಪೋಲಿಸ್ ಠಾಣೆಗೆ ಒಯ್ದು ಪರಿಶೀಲಿಸಿದಾಗ ಅದರ ಒಳಭಾಗದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಂಡು ಬಂದಿದೆ. ತಕ್ಷಣ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ ಪೊಲೀಸರು ಅದರಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಸೂಟ್‌ಕೇಸ್ ಒಳಭಾಗದಲ್ಲಿ ಮಹಿಳೆಯೊಬ್ಬರ ವಿಳಾಸ ಪತ್ತೆಯಾಗಿದ್ದು, ತಕ್ಷಣ ಅವರನ್ನು ಸಂಪರ್ಕಿಸಿ ಕುಶಾಲನಗರ ಪೊಲೀಸ್ ಠಾಣೆಗೆ ಬರುವಂತೆ ಸೂಚನೆ ನೀಡಿದ್ದಾರೆ. ಬೆಂಗಳೂರಿನಿAದ ಕುಶಾಲನಗರಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಬಂದ ತಾಯಿ ಮುಬೀನಾ, ಮಗಳು ಆಯಿಷಾ ಕುಶಾಲನಗರ ಕೊಪ್ಪ ಗೇಟ್ ಬಳಿ ಟಾಟಾ ಪೆಟ್ರೋಲ್ ಬಂಕ್ ಹತ್ತಿರ ಇಳಿದು ನಂತರ ಮಾದಾಪುರದಿಂದ ಬಂದ ತಮ್ಮ ಕಾರಿನಲ್ಲಿ ತೆರಳಿದ್ದು, ಈ ಸಂದರ್ಭ ಮೈಮರೆತು ಸೂಟ್‌ಕೇಸನ್ನು ರಸ್ತೆಯಲ್ಲೇ ಬಿಟ್ಟು ತೆರಳಿರುವುದಾಗಿ ಮಾಹಿತಿ ತಿಳಿದುಬಂದಿದೆ. ಸೂಟ್‌ಕೇಸನ್ನು ಕಂಡ ಸೋಮಶೇಖರ ನೀಡಿದ ಮಾಹಿತಿ ಮೇರೆಗೆ ತಕ್ಷಣ ಸ್ಥಳಕ್ಕೆ ಬಂದ ಕುಶಾಲನಗರ ಪಟ್ಟಣ ಠಾಣೆಯ ಎಎಸ್‌ಐ ಮಂಜುನಾಥ್ ಎಸ್.ಎನ್. ಜಯಪ್ರಕಾಶ್ ಅನಾಥವಾಗಿ ಕಂಡ ಸೂಟ್‌ಕೇಸ್ ಅನ್ನು ಪೊಲೀಸ್ ಠಾಣೆಗೆ ಒಯ್ದು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆ ನಡೆಸಿದ್ದಾರೆ.

ಕುಶಾಲನಗರ ಡಿವೈಎಸ್ಪಿ ಶೈಲೇಂದ್ರ ಕುಮಾರ್, ವೃತ್ತ ನಿರೀಕ್ಷಕ ಮಹೇಶ್, ಠಾಣಾಧಿಕಾರಿ ಚಂದ್ರಶೇಖರ್ ಮತ್ತು ಪೊಲೀಸ್ ಸಿಬ್ಬಂದಿಗಳು ಸೂಟ್‌ಕೇಸ್ ಮಾಲೀಕರನ್ನು ಪತ್ತೆ ಹಚ್ಚಿ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ .ಅನಾಥ ಸೂಟ್‌ಕೇಸ್ ಅನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿ ಪ್ರಾಮಾಣಿಕತೆ ಮೆರೆದ ಸೋಮಶೇಖರ್ ಅವರನ್ನು ಠಾಣೆಗೆ ಕರೆಸಿ ಅವರಿಗೆ ನಗದು ಬಹುಮಾನ ನೀಡಿ ಈ ಕಾರ್ಯಕ್ಕೆ ಪೊಲೀಸರು ಮತ್ತು ಸೂಟ್‌ಕೇಸ್ ಮಾಲೀಕರು ಶ್ಲಾಘನೆ ವ್ಯಕ್ತಪಡಿಸಿದರು.

ಪ್ರಾಮಾಣಿಕತೆ ಮೆರೆದ ಸೋಮಶೇಖರ್ ಇತರರಿಗೆ ಮಾದರಿಯಾಗಿದ್ದು ಈ ಘಟನೆ ಬಗ್ಗೆ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಬಿತ್ತರವಾಗಿದ್ದು ಎಲ್ಲೆಡೆ ಮೆಚ್ಚುಗೆ ವ್ಯಕ್ತಗೊಂಡಿದೆ.