ಮಡಿಕೇರಿ, ನ. ೭: ಮಾದಾಪುರ ಬಳಿಯ ಗರಗಂದೂರುವಿನಲ್ಲಿ ದಲಿತ ವಿದ್ಯಾರ್ಥಿನಿ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿರುವ ಆರೋಪಿ ಮೇಲೆ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿರುವ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು, ತಪ್ಪಿದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವು ದಾಗಿ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಪಕ್ಷದ ಸಂಘಟನಾ ಸಮಿತಿ ಕಾರ್ಯದರ್ಶಿ ಹೆಚ್.ಬಿ. ರಮೇಶ್ ಅವರು; ಕಳೆದ ತಾ. ೧ ರಂದು ಗರಗಂದೂರು ಬಿ (ಹೊಸತೋಟ) ನಿವಾಸಿ, ಹತ್ತನೇ ತರಗತಿ ವಿದ್ಯಾರ್ಥಿನಿ ರಮ್ಯಶ್ರೀ ಎಂಬಾಕೆ ಅಂಗಡಿಗೆ ತೆರಳಿದ್ದ ಸಂದರ್ಭ ಅದೇ ಗ್ರಾಮದ ರಮೇಶ ಎಂಬಾತ ಏಕಾಏಕಿ ಆಕೆಯ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ. ಇದರಿಂದಾಗಿ ವಿದ್ಯಾರ್ಥಿನಿಯ ಕುತ್ತಿಗೆ ಹಾಗೂ ಕೈಗೆ ಗಾಯವಾಗಿದ್ದು, ಆಕೆಯನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ (ಅಶ್ವಿನಿ ಆಸ್ಪತ್ರೆ) ದಾಖಲಿಸಲಾಗಿದೆ. ಈ ಸಂಬAಧ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಲಾಗಿ ಆರೋಪಿಯನ್ನು ಠಾಣೆಗೆ ಕೆರೆಸಿಕೊಂಡ ಪೊಲೀಸರು ಆತನ ವಿರುದ್ಧ ಸೂಕ್ತ ಕ್ರಮಕೈಗೊಳ್ಳದೆ ಬಿಡುಗಡೆಗೊಳಿಸಿದ್ದಾರೆ. ಇದರಿಂದಾಗಿ ಓರ್ವ ದಲಿತ ವಿದ್ಯಾರ್ಥಿನಿಗೆ ಅನ್ಯಾಯವಾಗಿದ್ದು, ಆಕೆಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಆರೋಪಿ ಯನ್ನು ಬಂಧಿಸಿ ಆತನ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಈ ಸಂಬAಧ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ದೂರು ಸಲ್ಲಿಸಲಿದ್ದು, ಸೂಕ್ತ ಕ್ರಮ ಜರುಗಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ವಿವಿಧ ಸಂಘಟನೆಗಳನ್ನು ಒಟ್ಟುಗೂಡಿಸಿ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಹೇಳಿದರು.

ಘಟನೆ ನಡೆದ ಕೂಡಲೇ ಪೊಲೀಸರಿಗೆ ದೂರು ನೀಡಲಾಗಿದ್ದರೂ ಪೊಲೀಸರು ೪೮ ಗಂಟೆಗಳ ಬಳಿಕ ಸ್ಥಳಕ್ಕೆ ತೆರಳಿ ಮಹಜರು ಮಾಡಿದ್ದಾರೆ. ಈ ರೀತಿಯ ವಿಳಂಬಕ್ಕೆ ಕಾರಣವೇನೆಂದು ಪ್ರಶ್ನಿಸಿದ ಅವರು, ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿದ್ಯಾರ್ಥಿನಿಯನ್ನು ಕೂಡ ಬಲವಂತವಾಗಿ ಬಿಡುಗಡೆ ಮಾಡಿ ಕಳುಹಿಸಲಾಗಿದೆ, ಒತ್ತಡಕ್ಕೆ ಮಣಿದು ಪೊಲೀಸರು ಈ ರೀತಿ ಮಾಡಿದ್ದು, ಇದನ್ನು ಖಂಡಿಸು ವದಲ್ಲದೆ, ನ್ಯಾಯ ದೊರಕುವವರೆಗೂ ಪ್ರತಿಭಟಿಸಲಾಗುವದೆಂದರು.

ಸAಘಟನೆಯ ಪ್ರಮುಖ ಮಹದೇವ್ ಮಾತನಾಡಿ, ಆರೋಪಿ ರಮೇಶ ಈ ಹಿಂದೆಯೂ ತನ್ನ ತಂದೆ ಹಾಗೂ ಸಹೋದರನ ಮೇಲೂ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ, ಗ್ರಾಮದಲ್ಲೂ ಜನರು ಈತನ ಬಗ್ಗೆ ಭಯಭೀತರಾಗಿದ್ದು, ಪೊಲೀಸರು ಈ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿ ತಪ್ಪಿತಸ್ಥನಿಗೆ ಶಿಕ್ಷೆ ವಿಧಿಸುವದರೊಂದಿಗೆ ಅಮಾಯಕ ಬಾಲಕಿಗೆ ನ್ಯಾಯ ಒದಗಿಸಿಕೊಡಬೇಕಿದೆ. ಬಾಲಕಿಯ ಕುತ್ತಿಗೆಗೆ ಕಡಿದ ಸಂದರ್ಭ ಆಕೆಯ ಕೂದಲಿನಿಂದಾಗಿ ಹೆಚ್ಚಾಗಿ ಗಾಯವಾಗಲಿಲ್ಲ, ಇಲ್ಲವಾದಲ್ಲಿ ಕುತ್ತಿಗೆ ತುಂಡರಿಸಲಿತ್ತು. ಅಲ್ಲದೆ, ಸಮಯಕ್ಕೆ ಸರಿಯಾಗಿ ಜೊತೆಯಲ್ಲಿದ್ದ ಆಕೆಯ ಸಹೋದರಿ ಹಾಗೂ ಮತ್ತೋರ್ವ ಬಾಲಕನ ಸಮಯ ಪ್ರಜ್ಞೆಯಿಂದಾಗಿ ಜೀವ ಉಳಿದಿದೆ ಎಂದು ಹೇಳಿದರು. ಅಲ್ಲದೆ, ದೂರು ನೀಡಲು ಕುಟುಂಬಸ್ಥರು ಠಾಣೆಗೆ ತೆರಳಿದ್ದ ಸಂದರ್ಭ ಕರ್ತವ್ಯದಲ್ಲಿದ್ದ ಸಹಾಯಕ ಠಾಣಾಧಿಕಾರಿ ಓರ್ವರು ದೂರುದಾರರನ್ನೇ ನಿಮ್ಮ ಮೇಲೆಯೇ ಮೊಕದ್ದಮೆ ದಾಖಲಿಸುವದಾಗಿ ಬೆದರಿಸಿ ಕಳುಹಿಸಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳು ಪರಿಶೀಲಿಸಿ, ನೊಂದ ಬಾಲಕಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಹೆಚ್.ಎಸ್. ಶಿವಪ್ಪ, ಬಾಲಕಿಯ ತಂದೆ ಬಿ. ರಾಮು, ಸಹೋದರಿ ಹೇಮ, ಸಂಬAಧಿ ಮಹದೇವ ಇದ್ದರು.