ವೀರಾಜಪೇಟೆ, ನ. ೬: ಮಸೀದಿಯ ಹುಂಡಿಯನ್ನು ಕಳ್ಳತನ ಮಾಡುತ್ತಿದ್ದ ಚೋರನನ್ನು ವೀರಾಜಪೇಟೆ ನಗರ ಪೊಲೀಸರು ಬಂಧಿಸಿದ್ದಾರೆ. ಸುಣ್ಣದ ಬೀದಿ ನಿವಾಸಿ ಮೊಹಮ್ಮದ್ ಶೋಯೆಬ್ (೨೮) ಬಂಧಿತ ಆರೋಪಿ.
ನೆಹರು ನಗರ ನೂರುಲ್ ಇಸ್ಲಾಂ ಮಸೀದಿಯ ಹುಂಡಿಯಲ್ಲಿದ್ದ ಸುಮಾರು ರೂ. ೧೦ ಸಾವಿರ ನಗದನ್ನು ಆರೋಪಿ ಕಳ್ಳತನ ಮಾಡಿದ್ದು, ನಿನ್ನೆ ಮುಂಜಾನೆ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗ ಸಂಶಯಾಸ್ಪದವಾಗಿ ತಿರುಗಾಡಿಕೊಂಡಿದ್ದ ವೇಳೆ ಆರೋಪಿಯನ್ನು ಬಂಧಿಸಲಾಗಿದೆ.
ತನಿಖೆ ವೇಳೆ ಬಂಧಿತನು ಮೈಸೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಸೀದಿಗಳನ್ನು ಗುರಿಯಾಗಿಸಿಕೊಂಡು ಮಸೀದಿ ಯಲ್ಲಿರುವ ಆಂಪ್ಲಿಫ್ಲೇಯರ್‌ಗಳನ್ನು ಕಳವು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಅಲ್ಲದೆ ಈತನ ಮೇಲೆ ಒಟ್ಟು ೪೪ ಕಳವು ಪ್ರಕರಣಗಳು ದಾಖಲಾಗಿದ್ದು ಹುಣಸೂರು ನ್ಯಾಯಾಲಯವು ಈತನಿಗೆ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಇತ್ತೀಚೆಗಷ್ಟೆ ಶಿಕ್ಷೆ ಅನುಭವಿಸಿ ಬಂಧಮುಕ್ತನಾಗಿದ್ದ. ಆದರೂ ಚಾಳಿ ಬಿಡದ ಆರೋಪಿ ಕಳವು ಮಾಡುವುದನ್ನು ಮುಂದುವರಿಸಿದ್ದ ಎನ್ನಲಾಗಿದೆ. ಬಂಧಿತನಿAದ ರೂ. ೩೦೦೦ ಮೌಲ್ಯದ ಮೊಬೈಲ್ ಮತ್ತು ನಗದನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಮತ್ತು ವೃತ್ತ ನಿರೀಕ್ಷಕ ಬಿ.ಎಸ್. ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ನಗರ ಠಾಣೆಯ ಅಪರಾಧ ವಿಭಾಗದ ಉಪ ನಿರೀಕ್ಷಕ ಹೆಚ್.ಎಸ್. ಬೋಜಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪಿ.ಯು. ಮುನೀರ್, ಮುಸ್ತಾಫ, ಗಿರೀಶ್, ಮಧು, ರಜನ್ ಕುಮಾರ್, ಜಿಲ್ಲಾ ಸಿ.ಡಿ.ಆರ್. ವಿಭಾಗದ ಸಿಬ್ಬಂದಿಗಳಾದ ರಾಜೇಶ್ ಮತ್ತು ಗಿರೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. - ಕೆ.ಕೆ.ಎಸ್.