ಗೋಣಿಕೊಪ್ಪ ವರದಿ, ನ. ೬ : ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವೃದ್ಧನನ್ನು ವಿದ್ಯಾರ್ಥಿನಿಯೊಬ್ಬಳು ಜೀವದ ಹಂಗು ತೊರೆದು ರಕ್ಷಿಸಿದ್ದಾಳೆ.

ಸೀಗೆತೋಡು ಎಂಬಲ್ಲಿ ಶನಿವಾರ ಮಧ್ಯಾಹ್ನ ಘಟನೆ ನಡೆದಿದೆ. ರ‍್ವತೋಕ್ಲು ಸರ್ವಧೈವತಾ ಕಾಲೇಜಿನ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಸೀಗೆತೋಡುವಿನ ಶಾಂತಿ, ಶಭರೀಶ ದಂಪತಿ ಪುತ್ರಿ ಎಂ. ಎಸ್. ನಮೃತಾ ವೃದ್ಧನನ್ನು ರಕ್ಷಿಸಿದ ವಿದ್ಯಾರ್ಥಿನಿಯಾಗಿದ್ದಾಳೆ. ವೃದ್ದ ಗೋಣಿಕೊಪ್ಪದ ಅಲೀಲ್ (೬೫) ಎಂಬವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ.

ಘಟನೆ ವಿವರ : ಮಧ್ಯಾಹ್ನ ೧.೩೦ ಗಂಟೆ ಸುಮಾರಿಗೆ ಕಾಲೇಜಿನಿಂದ ಮನೆಗೆ ಬಂದ ನಮೃತಾಳಿಗೆ ಮನೆಯ ಎದುರು ಇರುವ ಕೆರೆಯ ದಂಡೆ ಮೇಲೆ ವೃದ್ಧ ನಡೆಯುವುದು ಕಂಡು ಬಂದಿದೆ. ನೋಡುತ್ತಲೇ ಆತ ಚಪ್ಪಲಿ ಬಿಚ್ಚಿ ಕೆರೆಗೆ ಹಾರುವ ಪ್ರಯತ್ನ ಮಾಡುತ್ತಿರುವ ಬಗ್ಗೆ ಅರಿತು ಕೆರೆಯತ್ತ ತೆರಳಿದ್ದಾಳೆ. ಈ ಸಂದರ್ಭ ವೃದ್ಧ ಕೆರೆಗೆ ಹಾರಿದನ್ನು ಕಂಡ ನಮೃತಾ ತಾಯಿಗೆ ವಿಷಯ ತಿಳಿಸಿ ಓಡಿ ಬಂದು ಕೆರೆಗೆ ಜಿಗಿದು ವೃದ್ಧನ ಶರ್ಟ್ ಹಿಡಿದು ಎಳೆದು ದಂಡೆಯತ್ತ ತಂದ ಸಂದರ್ಭ ತಾಯಿ ಶಾಂತಿ ನೆರವಾಗಿದ್ದಾರೆ.

ಕಾಪಾಡು ಎಂದಿತು : ಅಜ್ಜ ಕೆರೆಗೆ ಹಾರಿದಾಗ ನನ್ನ ಮನಸ್ಸು ಕಾಪಾಡು ಎಂದು ಹೇಳಿತು. ಅದನ್ನೇ ಮಾಡಿದೆ ಎಂದು ೧೭ ವಯಸ್ಸಿನ ನಮೃತಾ ಹೇಳಿದರು. ಶಾಲಾ ವ್ಯಾನ್ ಇಳಿದು ಮನೆಗೆ ತಲುಪಿದ ತಕ್ಷಣ ಮನೆಯ ಸಮೀಪವಿರುವ ಕೆರೆಯಲ್ಲಿ ಅವರನ್ನು ಕಂಡೆ. ಸಂಶಯ ಹೆಚ್ಚಾಯಿತು. ಯಾರೇ ಹೊಸಬರು ಗ್ರಾಮದಲ್ಲಿ ಕಂಡಾಗ ಯಾರು, ಎಲ್ಲಿಯವರು ಎಂದು ಮಾಹಿತಿ ಕಲೆ ಹಾಕುತ್ತೇನೆ. ಇದರಂತೆ ಕೇಳಲು ಮುಂದಾಗಬೇಕು ಎಂದು ಊಹಿಸಿದಾಗ ವೃದ್ಧ ಕೆರೆಗೆ ಹಾರಿದನ್ನು ಕಂಡೆ. ನನ್ನದೇ ತಾತ ಎಂಬAತೆ ನೋವಾಯಿತು. ತಾಯಿಗೆ ಹೇಳಿ ರಕ್ಷಣೆಗೆ ಮುಂದಾದೆ. ತಾಯಿ ಕೂಡ ನೆರವಾದರು. ಆರೋಗ್ಯ ಸಮಸ್ಯೆಯಿಂದ ಹೀಗೆ ಮಾಡಿದೆ ಎಂದು ವೃದ್ಧ ಹೇಳಿದ. ತಕ್ಷಣ ಕುಟುಂಬದವರ ಮೊಬೈಲ್ ಸಂಖ್ಯೆ ಪಡೆದು ಮಾಹಿತಿ ನೀಡಿ ಒಪ್ಪಿಸಿದೆವು. ಈಜಲು ಕಲಿತದ್ದು ಪ್ರಯೋಜನಕ್ಕೆ ಬಂತು. ಜೀವ ಉಳಿಸಿದ ತೃಪ್ತಿ ನನಗೆ ಇದೆ ಎಂದು ನಮೃತಾ ಹೇಳುತ್ತಾಳೆ.