ವೀರಾಜಪೇಟೆ, ನ. ೪: ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಿಂದ ಸಿಗುವ ಸೌಲಭ್ಯಗಳನ್ನು ಪಡೆದು ಕೊಳ್ಳಲು ಜಿಲ್ಲೆಯ ಕಾರ್ಮಿಕರು ಮುಂದಾಗಬೇಕು ಎಂದು ಕಟ್ಟಡ ಕಾರ್ಮಿಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮಹಂತೇಶ್ ಹೇಳಿದರು
ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಪಟ್ಟಣದ ದೊಡ್ಡಟ್ಟಿಚೌಕಿಯಲ್ಲಿರುವ ಬೋರೆಗೌಡ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಸ್ತುçತ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅವರು ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿತ್ತು. ಅದು ಹುಸಿಯಾಗಿದೆ. ಸರಕಾರದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ ದಿನ ನಿತ್ಯದ ವಸ್ತುಗಳ ಬೆಲೆ ಗಗನಕ್ಕೇರಿದ್ದು ಬಡ ಕಾರ್ಮಿಕರು ಜೀವನ ನಡೆಸುವುದು ಸಮಸ್ಯೆಯಾಗಿದೆ. ಆದರಿಂದ ಡಿಸೆಂಬರ್ ೨ ಮತ್ತು ೩ ರಂದು ದೇಶಾದ್ಯಂತ ಕಾರ್ಮಿಕರ ಹೋರಾಟ ನಡೆಯಲಿದೆ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಕಾರ್ಮಿಕರಿಗೆ ಆಹಾರ ಕಿಟ್ ಕೊಡುವ ಹೆಸರಿನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರಲ್ಲದೆ ಕೊಡಗು ಜಿಲ್ಲೆಯಲ್ಲಿ ಎಲ್ಲಾ ಕಟ್ಟಡ ಕಾರ್ಮಿಕರು ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಘದ ಗುರುತಿನ ಚೀಟಿ ನೋಂದಾಯಿಸಿಕೊAಡು ಕಲ್ಯಾಣ ಮಂಡಳಿಯಿAದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಸುಮಾರು ೧೯ ಸೌಲಭ್ಯಗಳಿದ್ದು ಅದನ್ನು ಪಡೆದುಕೊಳ್ಳಲು ಕಟ್ಟಡ ಕಾರ್ಮಿಕರು ಮುಂದಾಗಬೇಕು ಎಂದರು.
ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಸಾಲಿ ಪೌಲಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ನಾಗೇಶ್, ಖಜಾಂಚಿ ಸಿ. ಹಮೀದ್, ಸದಸ್ಯರಾದ ಹರಿದಾಸ್, ಸುಬ್ರಮಣಿ, ಸುದರ್ಶನ್ ಉಪಸ್ಥಿತರಿದ್ದರು.
ಸಭೆಯಲ್ಲಿ ಮಡಿಕೇರಿ, ಸೋಮವಾರಪೇಟೆ, ಗೋಣಿಕೊಪ್ಪ, ಸಿದ್ದಾಪುರ ಹಾಗೂ ಇತರೆಡೆಗಳಿಂದ ಕಾರ್ಮಿಕರು ಭಾಗವಹಿಸಿದ್ದರು.