ಮಡಿಕೇರಿ: ಕನ್ನಡ ಸಾಹಿತ್ಯ ಪರಿಷತ್, ಸಂಪಾಜೆ ಹೋಬಳಿ ಘಟಕದ ಸಂಪಾಜೆಯ ಚೆಕ್ ಪೋಸ್ಟ್ ಬಳಿ ಕನ್ನಡ ಧ್ವಜಾರೋಹಣ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ನಿವೃತ್ತ ಯೋಧ ಮಾಯಿಲಪ್ಪ ಓ.ಆರ್. ಧ್ವಜಾರೋಹಣ ನೆರವೇರಿಸಿದರು. ಕಸಾಪ ಅಧ್ಯಕ್ಷ ಯನ್.ಸಿ.ಅನಂತ್ ಊರುಬೈಲು ರಾಜ್ಯೋತ್ಸವದ ಶುಭಾಶಯ ಕೋರಿದರು. ಕಸಾಪ ಕಾರ್ಯದರ್ಶಿ ಯಶೋಧರ ಬಿ.ಜೆ.ಆಗಮಿಸಿದ ಕನ್ನಡಾಭಿಮಾನಿಗಳನ್ನು ಸ್ವಾಗತಿಸಿ,ವಂದಿಸಿದರು.

ಈ ಸಂದರ್ಭ ಸಂಪಾಜೆ ಗ್ರಾ.ಪಂ.ಮಾಜಿ ಅಧ್ಯಕ್ಷ ಕುಮಾರ್ ಚೆದ್ಕಾರ್, ಸೊಸೈಟಿ ನಿರ್ದೇಶಕ ಯಶವಂತ, ಡಿಡಿಎಸ್ ಡಿಎಂಸಿ ಅಧ್ಯಕ್ಷ ಶ್ರೀಧರ ಪಡ್ಪು, ಆಟೋರಿಕ್ಷಾ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಪೊನ್ನಂಪೇಟೆ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸುಂದರ ಕನ್ನಡ ಕೈಬರಹ ಸ್ಪರ್ಧೆ ಹಾಗೂ ಕನ್ನಡ ರಾಜ್ಯೋತ್ಸವದ ಮಹತ್ವ ಎಂಬ ವಿಷಯದ ಬಗ್ಗೆ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕಾವೇರಿ ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪದವಿ ಪೂರ್ವ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಬಿ.ಜೆ.ಭೂಮಿಕ ಪ್ರಥಮ, ಸಿ.ಪಲ್ಲವಿ ದ್ವಿತೀಯ ಹಾಗೂ ಸಿ.ಸಹನ ತೃತೀಯ ಸ್ಥಾನ ಪಡೆದುಕೊಂಡರು.

ಪದವಿ ವಿಭಾಗದಲ್ಲಿ ಕೆ.ಸಿ.ಸಂಜೀವ ಪ್ರಥಮ, ವಸುಂಧರ ಭಾರ್ಗವ್ ದ್ವಿತೀಯ ಹಾಗೂ ಎನ್.ಎಂ. ಭೂಮಿಕ ತೃತೀಯ ಬಹುಮಾನ ಪಡೆದುಕೊಂಡರು. ಸುಂದರ ಕೈ ಬರಹ ಸ್ಪರ್ಧೆಯಲ್ಲಿ ಕೆ.ಸಿ.ಸಂಜೀವ ಪ್ರಥಮ, ಜಿತೇಂದ್ರ ದ್ವಿತೀಯ ಹಾಗೂ ಅಂಕಿತ ತೃತೀಯ ಬಹುಮಾನ ಪಡೆದು ಕೊಂಡರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಸಮಾಧಾನಕರ ಬಹುಮಾನ ನೀಡಲಾಯಿತು.

ಕಾವೇರಿ ಕಾಲೇಜು ಪ್ರಾಂಶುಪಾಲ ಪ್ರೊ.ಎಂ.ಬಿ.ಕಾವೇರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾವೇರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಎಂ.ಬಿ ಪದ್ಮ, ಐಕ್ಯೂಎಸಿ ಸಂಚಾಲಕಿ ಪ್ರೊ.ಎಂ.ಎಸ್.ಭಾರತಿ, ಕಾರ್ಯಕ್ರಮ ಸಂಯೋಜಕರಾದ ಡಾ. ಸಿ.ಎಂ.ರೇವತಿ, ಕುಸುಮ್ ಉಪಸ್ಥಿತರಿದ್ದರು. ಉಪನ್ಯಾಸಕಿ ಎಸ್.ಎಂ.ರಜನಿ ಕಾರ್ಯಕ್ರಮ ನಿರೂಪಿಸಿದರು.

ಮದೆನಾಡು : ಮದೆನಾಡು ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಳಿಕಟ್ಟೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಮದೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಿ.ಎ. ಚಂದ್ರಾವತಿ ಉದ್ಘಾಟಿಸಿದರು. ನಂತರ ಶಾಲಾ ಮಕ್ಕಳಿಂದ ಕನ್ನಡ ಗೀತಾ ಗಾಯನ ನಡೆಯಿತು.

ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪಿ.ಯು. ಸುಂದರ, ಮದೆ ಗ್ರಾಮ ಪಂಚಾಯಿತಿ ಸದಸ್ಯ ನಡುಗಲ್ಲು ರಾಮಯ್ಯ, ಶಾಲಾ ಮಾಜಿ ವಿದ್ಯಾರ್ಥಿನಿ ನಡುಗಲ್ಲು ಜನನಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಪೂರ್ಣೇಶ, ಯಾದವ, ಸೀತಮ್ಮ ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ಕೆ.ಬಿ. ಬಾಲಕೃಷ್ಣ ದಿನದ ಮಹತ್ವದ ಬಗ್ಗೆ ಮಾತನಾಡಿ ನಿರೂಪಿಸಿದರು. ಶಾಲಾ ಶಿಕ್ಷಕಿ ಕೋಮಲ ಸ್ವಾಗತಿಸಿ, ವಂದಿಸಿದರು.