ಗೋಣಿಕೊಪ್ಪಲು, ನ. ೪: ನಗರದಲ್ಲಿ ಪ್ಲಾಸ್ಟಿಕ್ ನಿಷೇದವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಕಠಿಣ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಪಂಚಾಯಿತಿಯ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷೆ ಚೈತ್ರ ಬಿ. ಚೇತನ್, ಬೆಳೆಯುತ್ತಿರುವ ನಗರದಲ್ಲಿ ದಿನದಿಂದ ದಿನಕ್ಕೆ ಪ್ಲಾಸ್ಟಿಕ್‌ಗಳು ಅಧಿಕ ಸಂಖ್ಯೆಯಲ್ಲಿ ಶೇಖರಣೆಯಾಗುತ್ತಿವೆ. ನಗರದ ವರ್ತಕರು ಹಾಗೂ ಸಾರ್ವಜನಿಕರು ಪ್ಲಾಸ್ಟಿಕನ್ನು ಸಂಪೂರ್ಣವಾಗಿ ನಿಷೇಧಿಸುವ ಮೂಲಕ ನಗರದ ಸ್ವಚ್ಛತೆಗೆ ಸಹಕರಿಸಬೇಕು. ತಪ್ಪಿದಲ್ಲಿ ವರ್ತಕರ ಅಂಗಡಿ ಮಳಿಗೆಗೆ ದಿಢೀರ್ ದಾಳಿ ನಡೆಸಿದಂಡ ವಿಧಿಸಲಾಗುವುದು ಅಲ್ಲದೆ ಮುಂದಿನ ದಿನಗಳಲ್ಲಿ ಅಂಗಡಿ ಮಳಿಗೆಯ ಲೈಸನ್ಸ್ ರದ್ದುಗೊಳಿಸುವ ಎಚ್ಚರಿಕೆ ನೀಡಿದರು.

ಈಗಾಗಲೇ ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು ಮೂರು ತಿಂಗಳುಗಳಾಗಿವೆ. ಹಲವು ಸಮಯದಿಂದ ಬಾಕಿ ಉಳಿದಿದ್ದ ೬೫ ಲಕ್ಷ ವಿದ್ಯುತ್ ಬಿಲ್ಲ್ ಅನ್ನು ಆದ್ಯತೆ ಮೇರೆ ಪರಿಗಣಿಸಿ ಸಂಪೂರ್ಣ ಹಣವನ್ನು ಚೆಸ್ಕಾಂಗೆ ಪಾವತಿ ಮಾಡಲಾಗಿದೆ.ಈ ಹಣಕ್ಕೆ ಮಾಸಿಕ ೬೫ ಸಾವಿರ ಬಡ್ಡಿ ರೂಪದಲ್ಲಿ ಚೆಸ್ಕಾಂ ವಿಧಿಸುತ್ತಿತ್ತು. ಇದೀಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ನಗರದಲ್ಲಿ ಹಲವು ಅಂಗಡಿ ಮಳಿಗೆಗಳ ಲೈಸನ್ಸ್ ಪರವಾನಗಿಯನ್ನು ಹೊಂದದೆ ವ್ಯವಹಾರ ನಡೆಸುತ್ತಿದೆ. ಕೂಡಲೇ ಪಂಚಾಯಿತಿಯ ಪರವಾನಿಗೆ ಪಡೆಯಬೇಕು ಹಾಗೂ ನವೀಕರಿಸಿಕೊಳ್ಳಬೇಕು. ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಅಂಗಡಿ ಮಳಿಗೆಗೆ ಭೇಟಿ ನೀಡಿದ ವೇಳೆ ಲೈಸನ್ಸ್ ಇಲ್ಲದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಶೌಚಾಲಯದ ನೀರನ್ನು ನಗರದ ಪ್ರಮುಖ ಚರಂಡಿಗಳಿಗೆ ಹರಿಯಬಿಟ್ಟು ಪರಿಸರವನ್ನು ಹಾಳು ಮಾಡುತ್ತಿರು ವುದು ಹಾಗೂ ಜನತೆ ಓಡಾಡಲು ಕಷ್ಟ ಪಡುತ್ತಿರುವುದು ಈಗಾಗಲೇ ಬೆಳಕಿಗೆ ಬಂದಿದೆ. ಕೂಡಲೇ ಇಂತಹವರು ಶೌಚಾಲಯದ ನೀರನ್ನು ಚರಂಡಿಗಳಿಗೆ ಬಿಡದಂತೆ ಎಚ್ಚರಿಕೆ ವಹಿಸಬೇಕು. ತಪ್ಪಿದಲ್ಲಿ ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗು ವುದು. ಖಾಲಿ ನಿವೇಶನಗಳನ್ನು ಹಾಗೆ ಬಿಟ್ಟಿರುವ ಮಾಲೀಕರು ತಮ್ಮ ನಿವೇಶನಗಳನ್ನು ಶುಚಿಯಾಗಿಟ್ಟು ಕೊಳ್ಳಬೇಕು, ಮುಂದಿನ ಗ್ರಾಮ ಸಭೆಯಲ್ಲಿ ವಿವಿಧ ವಾರ್ಡಿನ ೨೦೦ಕ್ಕೂ ಅಧಿಕ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ ಅಧ್ಯಕ್ಷೆ ಚೈತ್ರ ಪಂಚಾಯಿತಿಯ ಶುಚಿತ್ವ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ನಾಗರಿಕರು ಪಂಚಾಯಿತಿಯೊAದಿಗೆ ಸಹಕರಿಸ ಬೇಕೆಂದು ಮನವಿ ಮಾಡಿದರು.

ಪತ್ರಿಕಾ ಗೋಷ್ಠಿಯಲ್ಲಿ ಗ್ರಾ.ಪಂ. ಸದಸ್ಯರಾದ ಬಿ.ಎನ್.ಪ್ರಕಾಶ್, ರಾಮಕೃಷ್ಣ, ಕೆ. ರಾಜೇಶ್, ಹಕೀಮ್, ಪುಷ್ಪ, ಕೊಣಿಯಂಡ ಬೋಜಮ್ಮ, ಸೌಮ್ಯ ಬಾಲು, ರತಿ ಅಚ್ಚಪ್ಪ, ಹಾಗೂ ವಿವೇಕ್ ಉಪಸ್ಥಿತರಿದ್ದರು.