ಭಾಗಮಂಡಲ, ನ. ೪: ಚೆಟ್ಟಿಮಾನಿಯ ಕುಂದಚೇರಿ ಗ್ರಾಮ ಪಂಚಾಯಿತಿಗೆ ನೂತನ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲು ಗ್ರಾಮ ಪಂಚಾಯಿತಿ ಮುಂದಾಗಿದ್ದು, ದಾಖಲಾತಿಗಳಲ್ಲಿ ವ್ಯತ್ಯಾಸಗಳು ಇದೆಯೆಂದು ಗ್ರಾಮಸ್ಥರಲ್ಲಿ ಗೊಂದಲವಿದ್ದು ಈ ಬಗ್ಗೆ ವಿಶೇಷ ಗ್ರಾಮ ಸಭೆಯಲ್ಲಿ ಹಲವಾರು ವಿಷಯಗಳು ಪ್ರಸ್ತಾಪಿಸಲ್ಪಟ್ಟವು. ಕುಂದಚೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಅವರ ಅಧ್ಯಕ್ಷತೆಯಲ್ಲಿ ಇಂದು ವಿಶೇಷ ಗ್ರಾಮ ಸಭೆ ನಡೆದು ಅಂತಿಮವಾಗಿ ನೂತನ ಕಟ್ಟಡ ನಿರ್ಮಿಸಲು ಗ್ರಾಮಸ್ಥರ ಸರ್ವಾನು ಮತದಿಂದ ಒಪ್ಪಿಗೆ ನೀಡಿದರು.

ನೂತನ ಕಟ್ಟಡ ನಿರ್ಮಾಣ ಸಲುವಾಗಿ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಸುಮಾರು ೪೦ ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿಗೆ ಕೇಕಡ ಮತ್ತು ಅಮ್ಮವ್ವನ ಕುಟುಂಬಸ್ಥರು ಜಾಗವನ್ನು ನೀಡಿದ್ದು, ಕೈಬರಹದಲ್ಲಿ ದಾಖಲೆ ನೀಡಲಾಗಿತ್ತು. ಕಟ್ಟಡ ನಿರ್ಮಾಣ ಆಗುವ ಸಂದರ್ಭದಲ್ಲಿ ದಾಖಲೆಗಳ ತೊಂದರೆ ಆಗಬಹುದು ಎಂದು ಗ್ರಾಮಸ್ಥರಲ್ಲಿ, ಜನ ವಲಯದಲ್ಲಿ ಗೊಂದಲಗಳು ಹರಿದಾಡುತ್ತಿತ್ತು. ಈ ಬಗ್ಗೆ ವಿಶೇಷ ಗ್ರಾಮಸಭೆ ಆಡಳಿತ ಮಂಡಳಿ ಕರೆದಿತ್ತು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾಂಜಲಿ ಮಾತನಾಡಿ ಕಟ್ಟಡ ಈಗ ಶಿಥಿಲಾವಸ್ಥೆಯಲ್ಲಿದ್ದು, ಸೋರಿಕೆ ಆಗುತ್ತಿದೆ. ಕುಸಿಯುವ ಹಂತಕ್ಕೆ ತಲುಪಿದೆ. ಗ್ರಾಮ ಪಂಚಾಯಿತಿಯಲ್ಲಿ ಸುಮಾರು ೩೪ ಲಕ್ಷ ಹಣ ಕಾಯ್ದಿರಿಸಲಾಗಿದೆ. ಮೊದಲಿಗೆ ಕೆಳಹಂತದ ಕಟ್ಟಡ ನಿರ್ಮಾಣ ಆಗಲಿದೆ ಎಂದರು. ಈ ಸಂದರ್ಭ ಗ್ರಾಮಸ್ಥರು ಜಾಗದ ದಾಖಲಾತಿ ಮೊದಲು ಮಾಡಿಕೊಳ್ಳಿ; ನಂತರ ಕಟ್ಟಡ ಕಾಮಗಾರಿ ನಡೆಸಿ ಎಂದು ಒತ್ತಾಯಿ ಸಿದರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶ್ರೀಧರ್ ಮಾತನಾಡಿ, ಆಸ್ತಿಯ ದಾಖಲಾತಿಯನ್ನು ಜಾಗದ ಮಾಲೀಕರಿಂದ ಸ್ಟಾö್ಯಂಪ್ ಪೇಪರ್ ಮೂಲಕ ಬರೆಸಿಕೊಂಡು ಕಾಮಗಾರಿ ಮುಂದುವರಿಸಿ, ನಮ್ಮ ಅಭ್ಯಂತರ ಇಲ್ಲ ಎಂದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಾಣತ್ತಲೆ ಜಯಪ್ರಕಾಶ್ ಮಾತನಾಡಿ, ನಮ್ಮ ಅಧಿಕಾರ ಅವಧಿಯಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ ಕಟ್ಟಲು ಉದ್ದೇಶಿಸಲಾಗಿದ್ದು, ಕಾರಣಾಂತರಗಳಿAದ ಸಾಧ್ಯವಾಗಿಲ್ಲ. ಜಾಗವು ಗ್ರಾಮ ಪಂಚಾಯಿತಿ ಹೆಸರಿಗೆ ಬಂದಿರುವುದಿಲ್ಲ. ಆದರೆ ಹೊಸ ಕಟ್ಟಡದ ಕಾಮಗಾರಿ ಮುಂದು ವರಿಸುವ ಸಂದರ್ಭದಲ್ಲಿ ರೆಕಾರ್ಡ್ ಗಳಿಗಾಗಿ ಓಡಾಡಬೇಕಾಗಬಹುದು ಎಂದರು. ಮಂಗೇರಿರ ಸುಮಿತ್ರಾ ಮಾತನಾಡಿ, ಸ್ವಸಹಾಯ ಸಂಘದವರು ಸಭೆ ನಡೆಸಲು ಸರಿಯಾದ ಜಾಗ ಇರುವುದಿಲ್ಲ. ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ನಮಗೂ ಕೂಡ ಅನುಕೂಲವಾಗಲಿದೆ ಎಂದರು. ಮಂಗೇರಿರ ಜಗದೀಶ್, ಕೇಕಡ ರವೀಂದ್ರ, ಅಣ್ಣಯ್ಯ ಮಾತನಾಡಿ, ಆದಷ್ಟು ಬೇಗ ಕಟ್ಟಡ ನಿರ್ಮಾಣ ಕಾರ್ಯ ಮುಂದುವರಿಸಿ ಎಂದರು. ಕೆದಂಬಾಡಿ ಜಯಪ್ರಕಾಶ್ ಕಟ್ಟಡ ಕಟ್ಟಲು ಹಣ ಇದೆಯೇ ಎಂದು ಪ್ರಶ್ನಿಸಿದರು. ಉತ್ತರವಾಗಿ ಮಾತನಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾಂಜಲಿ ೧೦ ಲಕ್ಷ ೮೫ ಸಾವಿರ ರೂ.ಗಳನ್ನೂ ಜಿಲ್ಲಾ ಪಂಚಾಯಿತಿ ಇಂಜಿನಿಯರಿAಗ್ ಉಪವಿಭಾಗಕ್ಕೆ ವರ್ಗಾಯಿಸಲಾಗಿದೆ. ರಾಜೀವ್ ಗಾಂಧಿ ಸಶಕ್ತಿಕರಣ ಹಾಗೂ ೧೫ನೇ ಹಣಕಾಸಿನ ಯೋಜನೆಯಡಿ ೨.೩೬,೦೦೦ ರೂಪಾಯಿ ಹಾಗೂ ಎರಡು ಲಕ್ಷ ೩೭ ಸಾವಿರ ರೂಪಾಯಿಗಳನ್ನು ಹಾಗೂ ಶೌಚಾಲಯಕ್ಕೆ ೬೫.೫೦೦ ರೂ. ರ‍್ಯಾಂಪ್ ನಿರ್ಮಾಣಕ್ಕೆ ೧೫ ಸಾವಿರ ರೂಪಾಯಿಗಳನ್ನು ಮೀಸಲಿಡಲಾಗಿದೆ. ಇದಲ್ಲದೆ ರಾಜೀವ್ ಗಾಂಧಿ ಸೇವಾ ಕೇಂದ್ರ ನಿರ್ಮಾಣಕ್ಕೆ ೧೮,೨೨,೦೦೦ ರೂ. ಮೀಸಲಿರಿಸಿದ್ದು, ಒಟ್ಟು ೩೪ ಲಕ್ಷ ೬೨ ಸಾವಿರ ರೂಪಾಯಿ ಅನುದಾನ ಇದ್ದು ಸದ್ಯಕ್ಕೆ ಅನುದಾನದ ಕೊರತೆ ಇರುವುದಿಲ್ಲ. ಅನುದಾನದಲ್ಲಿ ಕಟ್ಟಡಕ್ಕೆ ಮೀಸಲಿರಿಸಿದ ಮೊತ್ತವನ್ನು ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗಕ್ಕೆ ಈಗಾಗಲೇ ವರ್ಗಾಯಿಸಿರುವುದರಿಂದ ಮುಂದಿನ ಪ್ರಕ್ರಿಯೆ ಪಿಆರ್ ಇಡಿ ಹಂತದಲ್ಲಿ ಆಗಲಿದೆ ಎಂದರು.

ಪಾಣತ್ತಲೆ ವಿಶ್ವನಾಥ್ ಆದಷ್ಟು ಬೇಗ ಕಟ್ಟಡ ನಿರ್ಮಾಣವಾಗಲಿದೆ ಎಂದರು. ಗ್ರಾಮ ಪಂಚಾಯಿತಿ ಸದಸ್ಯ ಹ್ಯಾರಿಸ್ ಮಾತನಾಡಿ ಕಟ್ಟಡ ಕಾಮಗಾರಿ ಹಂತಹAತವಾಗಿ ಆಗಲಿದೆ. ಸುಮಾರು ಒಂದು ಕೋಟಿ ರೂಪಾಯಿ ಹಣದ ಅವಶ್ಯಕತೆ ಇದೆ ಎಂದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಕೆದಂಬಾಡಿ, ಟಿ.ಡಿ. ದಿನೇಶ್, ಬೇಬಿ ಬಿ.ಎಂ. ಬಸಪ್ಪ, ನಮಿತಾ, ಗ್ರಾಮ ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು.