ಗೋಣಿಕೊಪ್ಪ ವರದಿ, ನ. ೪: ಸರ್ಕಾರದ ಉಚಿತ ಕಾನೂನು ಸೇವೆ ಪಡೆದುಕೊಳ್ಳಲು ಹಿಂದೇಟು ಹಾಕಬೇಡಿ ಎಂದು ಪೊನ್ನಂಪೇಟೆ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಬಿ. ಗಿರಿಗೌಡ ಹೇಳಿದರು. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ, ಕಾನೂನು ಸೇವೆಗಳ ಸಂಘ, ಮಾನಿಲ್ ಅಯ್ಯಪ್ಪ ಸೇವಾ ಸಮಿತಿಯ ಸಹಯೋಗದಲ್ಲಿ ಮಾಯಮುಡಿ ಮಾನಿಲ್ ಅಯ್ಯಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಉಚಿತ ಕಾನೂನು ಸೇವೆ ಪಡೆದುಕೊಳ್ಳಲು ಜಾತಿ, ಆದಾಯದ ಚೌಕಟ್ಟು ಇಲ್ಲ. ನ್ಯಾಯಾಲಯದಲ್ಲಿ ಇಂತಹ ಉಚಿತ ಸೇವೆ ಪಡೆದುಕೊಳ್ಳಲು ಮುಂದಾಗಬೇಕಿದೆ. ಲೋಕ ಅದಾಲತ್ ಮೂಲಕವೂ ಇತ್ಯರ್ಥವಾಗಬೇಕಿರುವ ಪ್ರಕರಣಕ್ಕೂ ಕೂಡ ಶೀಘ್ರವಾಗಿ ಪರಿಹಾರ ದೊರೆಯುತ್ತದೆ. ಇಂತಹ ಸೇವೆ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು. ಖರ್ಚು, ಸಮಯ ವ್ಯರ್ಥವಾಗದಂತೆ ಪ್ರಕರಣ ನ್ಯಾಯಾಲಯ ಮೆಟ್ಟಿಲೇರುವ ಮುನ್ನ ರಾಜಿ ಸಂಧಾನದ ಮೂಲಕವೂ ಇತ್ಯರ್ಥಪಡಿಸಲು ಅವಕಾಶವಿದೆ. ಸಾಕಷ್ಟು ಪ್ರಕರಣಗಳಿಗೆ ತಟಸ್ಥ ವ್ಯಕ್ತಿಯ ಮದ್ಯಸ್ಥಿಕೆಯೊಂದಿಗೆ ರಾಜಿ ಸಂಧಾನದಿAದ ನ್ಯಾಯ ಪಡೆದುಕೊಳ್ಳಲು ಅವಕಾಶ ಇದೆ. ೬ ತಿಂಗಳ ಒಳಗೆ ಪ್ರಕರಣ ಇತ್ಯರ್ಥ ಪಡಿಸಲು ಅವಕಾಶವಿರುವುದರಿಂದ ಸಮಯ ಮತ್ತು ಆರ್ಥಿಕ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಕಾನೂನು ಸೇವೆ ಪಡೆಯಲು ಮುಂದಾಗಬೇಕು ಎಂದರು.

ಪೊನ್ನAಪೇಟೆ ವಕೀಲರ ಸಂಘದ ಅಧ್ಯಕ್ಷ ಅಜ್ಜಮಾಡ ಮೋನಿ ಪೊನ್ನಪ್ಪ, ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಗೌರವ ಅಧ್ಯಕ್ಷ ಸಣ್ಣುವಂಡ ಬಿ. ರಮೇಶ್, ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿದರು. ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಪಿ. ಮೀನಾ, ಮಾನವ ಹಕ್ಕು ಭ್ರಷ್ಟಾಚಾರ ವಿರೋಧಿ ಸಂಸ್ಥೆ ರಾಜ್ಯ ಕಾರ್ಯದರ್ಶಿ ಆರ್. ಯಶೋಧ, ವೀರಾಜಪೇಟೆ ತಾಲೂಕು ಅಧ್ಯಕ್ಷ ಬಲ್ಯಂಡ ಕುಶ ರಮೇಶ್ ಇದ್ದರು.