ತನಿಖೆಗೆ ಸಿಇಓ ಸೂಚನೆ

ಚೆಟ್ಟಳ್ಳಿ, ನ. ೩: ಕಾಮಗಾರಿ ನಿರ್ವಹಿಸದೆ ಅನುದಾನ ಬಿಡುಗಡೆಯಾಗಿದೆ ಎಂದು ಆರೋಪಿಸಿ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಬಲ್ಲಾರಂಡ ಕಂಠಿ ಕಾರ್ಯಪ್ಪ ಜಿಲ್ಲಾಧಿಕಾರಿಗೆ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗೆ ದೂರು ಸಲ್ಲಿಸಿದ್ದು, ತನಿಖೆ ನಡೆಸಿ ಮುಂದಿನ ಕ್ರಮಕೈಗೊಳ್ಳುವ ಬಗ್ಗೆ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಸೂಚಿಸಿದ್ದಾರೆ.

ಸೋಮವಾರಪೇಟೆ ತಾಲೂಕು ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಕಂಡಕರೆಯ ಸರಕಾರಿ ಕೆರೆಯ ಹೂಳು ತೆಗೆಯುವ ಕಾಮಗಾರಿಗೆ ೨೦೧೮-೧೯ನೇ ಸಾಲಿನಲ್ಲಿ ರೂ. ೨.೯೦ ಲಕ್ಷ ಹಣ ಬಿಡುಗಡೆಯಾಗಿದೆ. ಆದರೆ, ಕಾಮಗಾರಿ ನಡೆದಿಲ್ಲ. ಕೂಡ್ಲೂರು ಚೆಟ್ಟಳ್ಳಿ ಗೌಡ ಸಮಾಜದ ಹತ್ತಿರ ಸಾರ್ವಜನಿಕ ಜಾಗದಲ್ಲಿ ತಡೆಗೋಡೆ ಅಡಿಪಾಯ ಕಾಮಗಾರಿ ನಡೆಸದೆ ಒಂದು ಲಕ್ಷ ರೂಪಾಯಿ ಪಾವತಿ ಮಾಡಲಾಗಿದೆ. ಕಾಮಗಾರಿ ನಿರ್ವಹಿಸದೆ ಸರಕಾರದ ಅನುದಾನವನ್ನು ಹಿಂದಿನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಕಂಠಿ ಆರೋಪಿಸಿದ್ದು, ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳುವ ಮೂಲಕ ಸರಕಾರದ ದುರುಪಯೋಗ ಪಡಿಸಿದ ಹಣವನ್ನು ವಸೂಲಿ ಮಾಡಬೇಕೆಂದು ಕಂಠಿ ಕಾರ್ಯಪ್ಪ ಸೆಪ್ಟೆಂಬರ್ ೬ ರಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದರು.

ದೂರಿನ ಹಿನ್ನೆಲೆ ಜಿಲಾ ್ಲಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್‌ಸಿAಗ್ ಮೀನಾ ಅಕ್ಟೋಬರ್ ೪ ರಂದು ಮಡಿಕೇರಿಯ ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಹಾಗೂ ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ವಿಷಯದ ಬಗ್ಗೆ ಸೂಕ್ತ ತನಿಖೆ ಕೈಗೊಂಡು ಮುಂದಿನ ಕ್ರಮವಹಿಸುವಂತೆ ಆದೇಶಿಸಿದ್ದಾರೆ.