ಸೋಮವಾರಪೇಟೆ, ನ. ೩: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಇಲ್ಲಿನ ಶಾಂತಳ್ಳಿ ರಸ್ತೆಯ ಆಲೇಕಟ್ಟೆಯಲ್ಲಿ ನಿರ್ಮಿಸಲಾಗಿರುವ ಮಾರುಕಟ್ಟೆ ಪ್ರಾಂಗಣಕ್ಕೆ ವಿದ್ಯುತ್ ಸ್ಥಗಿತಗೊಳಿಸುವ ಮೂಲಕ ಆರ್ಎಂಸಿಯಿAದ ರೈತರಿಗೆ ಕತ್ತಲ ಭಾಗ್ಯದ ಕೊಡುಗೆ ನೀಡಲಾಗಿದೆ.
ಕಳೆದ ೨ ತಿಂಗಳಿನಿAದ ಆರ್ಎಂಸಿ ಮಾರುಕಟ್ಟೆಗೆ ಸಂಪರ್ಕ ನೀಡಿದ್ದ ವಿದ್ಯುತ್ನ್ನು ಸ್ಥಗಿತಗೊಳಿ ಸಲಾಗಿದ್ದು, ಪರಿಣಾಮ ರೈತರು ತಾವು ಬೆಳೆದ ಉತ್ಪನ್ನಗಳನ್ನು ತಂದು ಕತ್ತಲಿನಲ್ಲಿಯೇ ಮಾರಾಟ ಮಾಡಬೇಕಿದೆ.
ಈ ಹಿಂದೆ ಆರ್ಎಂಸಿ ಅಧ್ಯಕ್ಷರಾಗಿದ್ದ ಬಿ.ಬಿ. ಸತೀಶ್ ಅವರ ಅವಧಿಯಲ್ಲಿ ಸೋಮವಾರಪೇಟೆ ಯಲ್ಲಿ ಸುಸಜ್ಜಿತ ಆರ್ಎಂಸಿ ಪ್ರಾಂಗಣವನ್ನು ನಿರ್ಮಿಸಲಾಗಿತ್ತು. ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಮಾರುಕಟ್ಟೆಗೆ ತಂದ ಸಂದರ್ಭ, ಮಳೆಯಿಂದ ರಕ್ಷಣೆ ಪಡೆಯಲು ಸುಸಜ್ಜಿತ ಶೆಡ್ಗಳನ್ನು ನಿರ್ಮಿಸಿ, ಪ್ರಾಂಗಣಕ್ಕೆ ಕಾಂಕ್ರೀಟ್ ಅಳವಡಿಸಿ ಜಿಲ್ಲೆಯಲ್ಲಿಯೇ ಉತ್ತಮ ಮಾರುಕಟ್ಟೆ ಎಂಬ ಹೆಗ್ಗಳಿಕೆಯನ್ನೂ ಪಡೆದಿತ್ತು.
ಇದರೊಂದಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಕೆಸರು ಗದ್ದೆಯಂತಿದ್ದ ಮಾರುಕಟ್ಟೆ ಯನ್ನು ಹೈಟೆಕ್ ಆಗಿ ಪರಿವರ್ತಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಉತ್ತಮ ನಿರ್ವಹಣೆಯನ್ನೇ ಕಂಡಿರುವ ಮಾರುಕಟ್ಟೆ, ಇದೀಗ ಕಳೆದೆರಡು ತಿಂಗಳಿನಿAದ ಕತ್ತಲ ಕೂಪಕ್ಕೆ ತಳ್ಳಲ್ಪಟ್ಟಿದೆ.
ಅತೀ ಹೆಚ್ಚು ಗ್ರಾಮೀಣ ಪ್ರದೇಶವನ್ನೇ ಹೊಂದಿರುವ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಸಣ್ಣ ಹಾಗೂ ಅತೀ ಸಣ್ಣ ರೈತರು ಅಧಿಕವಿದ್ದು, ತಾವು ಬೆಳೆದ ಬಾಳೆ, ಕಿತ್ತಳೆ, ಶುಂಠಿ, ತರಕಾರಿ, ಮೆಣಸು ಸೇರಿದಂತೆ ಇನ್ನಿತರ ಕೃಷಿ ಉತ್ಪನ್ನಗಳನ್ನು ಪ್ರತಿ ಭಾನುವಾರ ರಾತ್ರಿ ಅಥವಾ ಸೋಮವಾರ ನಸುಕಿನ ಜಾವದಲ್ಲಿ ಆರ್ಎಂಸಿಗೆ ತಂದು ವ್ಯಾಪಾರ ಮಾಡುತ್ತಿದ್ದಾರೆ.
ಈ ಮಧ್ಯೆ ಕಳೆದ ಐದಾರು ತಿಂಗಳಿನಿAದ ವಿದ್ಯುತ್ ಶುಲ್ಕ ಪಾವತಿಸದ ಹಿನ್ನೆಲೆ ಸೆಸ್ಕ್ ಸಿಬ್ಬಂದಿಗಳು ಆರ್ಎಂಸಿಗೆ ನೀಡಿದ್ದ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿದ್ದಾರೆ. ಪರಿಣಾಮ ಕಳೆದ ೨ ತಿಂಗಳಿನಿAದ ಮಾರುಕಟ್ಟೆ ಕತ್ತಲ ಕೂಪದಲ್ಲಿದೆ. ಇದರಿಂದಾಗಿ ಗ್ರಾಮೀಣ ಭಾಗದಿಂದ ಬರುವ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಕತ್ತಲಿನಲ್ಲಿಯೇ ಮಾರಾಟ ಮಾಡುವಂತಾಗಿದೆ. ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ಹಲವಷ್ಟು ರೈತರು ಚರಂಡಿಗೆ ಬಿದ್ದು ಗಾಯ ಗೊಳ್ಳುತ್ತಿದ್ದಾರೆ. ತಕ್ಷಣ ಮಾರುಕಟ್ಟೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಕೃಷಿಕರು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್ಎಂಸಿ ಸದಸ್ಯರು, ತಾಲೂಕು ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರು ಉಳಿದುಕೊಳ್ಳಲು ಮಾರುಕಟ್ಟೆಯ ಕೆಲ ಶೆಡ್ಗಳನ್ನು ನೀಡಲಾಗಿತ್ತು. ವಿದ್ಯುತ್ ಬಿಲ್ ಅವರೇ ಪಾವತಿಸುವಂತೆ ಸೂಚಿಸಲಾಗಿತ್ತು. ಆದರೆ ಬಿಲ್ ಪಾವತಿಸಿಲ್ಲ. ಹೀಗಾಗಿ ಸೆಸ್ಕ್ ಸಿಬ್ಬಂದಿಗಳು ವಿದ್ಯುತ್ ಸ್ಥಗಿತಗೊಳಿಸಿದ್ದಾರೆ. ಈ ವಾರದೊಳಗೆ ಮಾರುಕಟ್ಟೆಗೆ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. -ವಿಜಯ್