ವೀರಾಜಪೇಟೆ: ನ, ೪: ಜೀವನದಲ್ಲಿ ಮನನೊಂದು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ವೀರಾಜಪೇಟೆ ಸಮೀಪದ ಬಾಳುಗೋಡಿನಲ್ಲಿ ನಡೆದಿದೆ. ಬಾಳುಗೋಡು ನಿವಾಸಿ ದಿವಂಗತ ಭೀಮಯ್ಯ ಅವರ ಪುತ್ರ ಪ್ರಕಾಶ್ (ದೇವಯ್ಯ-೪೦) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಮೃತ ಪ್ರಕಾಶ್ ಈ ಹಿಂದೆ ಖಾಸಗಿ ಬಸ್ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ನಂತರ ಕೂಲಿ ಕೆಲಸ ಮಾಡುತ್ತಿದ್ದರು. ಅವಿವಾಹಿತ ಪ್ರಕಾಶ್ ಕೌಟುಂಬಿಕ ಸಮಸ್ಯೆಯಿಂದ ನೊಂದು ಮನೆಯ ಕೋಣೆಯೊಂದರ ಮರದ ಬಿಟ್ಟಕ್ಕೆ ತಾ. ೩ ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ ಸೀತಮ್ಮ ಮಗನನ್ನು ನೋಡಲು ಹೋದಾಗ ಘಟನೆ ಬೆಳಕಿಗೆ ಬಂದಿದೆ.

ಮೃತರ ತಾಯಿ ಸೀತಮ್ಮ ಅವರು ನೀಡಿದ ದೂರಿನ ಅನ್ವಯ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.