ಸೂಕ್ತ ಕ್ರಮಕ್ಕೆ ಒತ್ತಾಯ
ಮಡಿಕೇರಿ, ಅ. ೨: ಬೆಳಗಿನ ಜಾವ ಮಗು ಮಸೀದಿಗೆ ತೆರಳುತ್ತಿದ್ದ ಸಂದರ್ಭ ಬೀದಿ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿದ್ದು, ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ತಾ. ೨ ರ ಬೆಳಿಗ್ಗೆ ೬ ಗಂಟೆ ಸುಮಾರಿಗೆ ನಗರದ ಮಹದೇವಪೇಟೆಯ ಜಮೀರ್ ಹಾಗೂ ಕೈರುನೀಸ ಅವರ ಪುತ್ರ ಜಿಯಾಮ್ (೭) ಮನೆಯ ಸಮೀಪದಲ್ಲಿರುವ ಮದ್ರಸಕ್ಕೆ ತೆರಳುತ್ತಿದ್ದ ಸಂದರ್ಭ ನಾಯಿಗಳ ಹಿಂಡು ಬಾಲಕನ ಮೇಲೆ ದಾಳಿ ನಡೆಸಿದ ಪರಿಣಾಮ ತೊಡೆ, ಕೈಗಳಿಗೆ ಗಾಯಗಳಾಗಿವೆ. ಬಾಲಕನ ಚೀರಾಟ ಕೇಳಿದ ಅಕ್ಕಪಕ್ಕದವರು ಬಂದು ನಾಯಿಗಳನ್ನು ಓಡಿಸಿ ಬಾಲಕನನ್ನು ಪಾರು ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ನಾಯಿಗಳ ಹಿಂಡು ಇದೇ ಪ್ರದೇಶದಲ್ಲಿ ಬಾಲಕಿಯನ್ನು ಕಚ್ಚಿ ಗಾಯಗೊಳಿಸಿತ್ತು. ತೀವ್ರ ಅಸ್ವಸ್ಥಗೊಂಡಿದ್ದ ಬಾಲಕಿ ೭ ದಿನಗಳ ಕಾಲ ಚಿಕಿತ್ಸೆ ಪಡೆದುಕೊಂಡಿದ್ದಳು.
ಕ್ರಮಕ್ಕೆ ಆಗ್ರಹ
ಮಡಿಕೇರಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ನಗರಸಭೆ ಸೂಕ್ತ ಕ್ರಮಕೈಗೊಳ್ಳಬೇಕು. ಮಕ್ಕಳ ಮೇಲೆ ನಾಯಿಗಳು ದಾಳಿ ನಡೆಸುತ್ತಿರುವ ಪ್ರಕರಣಗಳು ಆಗಾಗ್ಗೆ ನಡೆಯುತ್ತಿರುವುದನ್ನು ನಗರಸಭೆ ಗಂಭೀರವಾಗಿ ಪರಿಗಣಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸೆ. ೨೨ ರಂದು ನಗರಸಭೆಯೂ ಪತ್ರಿಕಾ ಹೇಳಿಕೆ ಮೂಲಕ ಬೀದಿನಾಯಿ ಹಾವಳಿ ತಡೆಗೆ ಕ್ರಮವಹಿಸಲಾಗುತ್ತಿದೆ ಎಂದು ಭರವಸೆ ನೀಡಿತ್ತು. ಆದರೆ, ಇದುವರೆಗೂ ನಾಯಿಗಳ ಹಾವಳಿ ಕಡಿವಾಣಕ್ಕೆ ಯಾವುದೇ ಕ್ರಮ ವಹಿಸದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.