ಸೋಮವಾರಪೇಟೆ, ನ. ೩: ಯಾವುದೇ ಸಂಸ್ಕೃತಿ ಉಳಿಯಬೇಕಾದರೆ ಅದನ್ನು ಆಚರಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಅರೆಭಾಷೆ ಸಂಸ್ಕೃತಿಯನ್ನು ಆಚರಿಸುವ ಮೂಲಕ ಅದನ್ನು ಉಳಿಸುವ ಕಾರ್ಯ ಆಗಬೇಕೆಂದು ಮಡಿಕೇರಿ ಆಸ್ಪತ್ರೆಯ ಮಕ್ಕಳ ತಜ್ಞ ಮೇ. ಡಾ. ಕುಶ್ವಂತ್ ಕೋಳಿಬೈಲ್ ಅಭಿಪ್ರಾಯಿಸಿದರು.

ಇಲ್ಲಿನ ಸಾಂದೀಪನಿ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಸೋಮವಾರಪೇಟೆ ಅರೆಭಾಷೆ ಗೌಡ ಸಮಾಜದ ಸಂತೋಷ ಕೂಟ ಹಾಗೂ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಂಸ್ಕೃತಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ಅದನ್ನು ಉಳಿಸಿಕೊಳ್ಳುವ ಕಾರ್ಯ ಆಗಬೇಕು. ವಿಶಿಷ್ಟವಾಗಿರುವ ಅರೆಭಾಷೆ ಸಂಸ್ಕೃತಿಯ ಆಚಾರ ವಿಚಾರ, ಪದ್ಧತಿ ಪರಂಪರೆ, ಹಬ್ಬಾಚರಣೆಗಳನ್ನು ಇಂದಿನ ಯುವ ಜನಾಂಗ ಅರಿತು ಅದನ್ನು ಮುಂದುವರೆಸುವ ಕೆಲಸ ಆಗಬೇಕು ಎಂದು ಕರೆ ನೀಡಿದ ಅವರು, ಧೀರ ಪರಂಪರೆಯ ಸ್ವಾತಂತ್ರö್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡ ಅವರ ಜೀವನ ವೃತ್ತಾಂತವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಬೆಂಗಳೂರು ಮಹಾ ನಗರ ಪಾಲಿಕೆಯ ನಿವೃತ್ತ ಜಂಟಿ ಆಯುಕ್ತ ಪಾಣತ್ತಲೆ ಪಳಂಗಪ್ಪ ಮಾತನಾಡಿ, ಜನಾಂಗ ಬಾಂಧವರು ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು. ಇದರೊಂದಿಗೆ ಇತರ ಆಸಕ್ತಿ ಕ್ಷೇತ್ರಗಳಲ್ಲೂ ಸಾಧನೆ ಮಾಡಬೇಕು. ಸಾಧಕರಿಗೆ ಸಮಾಜವೂ ಪ್ರೋತ್ಸಾಹ ನೀಡುವಂತಾಗಬೇಕೆAದು ಆಶಿಸಿದರು.

ಸಂತೋಷ ಕೂಟದ ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ದಂಡಿನ ಎಂ. ಉತ್ತಯ್ಯ ಮಾತನಾಡಿ, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಐಎಎಸ್ ಹಾಗೂ ಐಪಿಎಸ್‌ನಂತಹ ಉನ್ನತ ಹುದ್ದೆ ಅಲಂಕರಿಸುವ ಗುರಿ ಹೊಂದಿ, ಆ ದಿಸೆಯಲ್ಲಿ ಸಾಧನೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಸಾಂದೀಪನಿ ಶಾಲೆಯ ಮುಖ್ಯಸ್ಥರಾದ ಮೂಡಗದ್ದೆ ದಾಮೋಧರ್, ಲಿಖಿತ್ ದಾಮೋಧರ್, ಸಮಾಜದ ಉಪಾಧ್ಯಕ್ಷ ಮುಕ್ಕಾಟಿ ಚಂಗಪ್ಪ, ಕಾರ್ಯದರ್ಶಿ ನಂಗಾರು ವಸಂತ್, ಖಜಾಂಚಿ ಕುದುಕುಳಿ ಗಜೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಮಾಜದ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಇದಕ್ಕೂ ಮುನ್ನ ಸಮಾಜ ಬಾಂಧವರಿಗೆ ವಿವಿಧ ಕ್ರೀಡಾಕೂಟ ಆಯೋಜಿಸಲಾಗಿತ್ತು. ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಕಪ್ಪೆ ಓಟ, ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ೧೦೦ ಮೀಟರ್ ಓಟ, ಕಾಲೇಜು ವಿದ್ಯಾರ್ಥಿಗಳಿಗೆ ನಿಂಬೆಹಣ್ಣು ಚಮಕ ಓಟ, ಪುರುಷ-ಮಹಿಳೆಯರಿಗೆ ಮೊಟ್ಟೆ ಒಡೆಯುವ ಸ್ಪರ್ಧೆ, ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ಮಹಿಳೆಯರಿಗೆ ಸಂಗೀತ ಕುರ್ಚಿ, ಹಗ್ಗಜಗ್ಗಾಟ ಸೇರಿದಂತೆ ಇತರ ಸ್ಪರ್ಧೆಗಳು ನಡೆದವು.

ಪಳಂಗೋಟು ಕವಿತ, ಸೂದನ ಸೋಮಣ್ಣ, ಕುದುಕುಳಿ ಬೋಜರಾಜ್, ಚಿತ್ರಾ ಬೋಜರಾಜ್, ಬೈಲೆ ಅಶ್ವಿನಿ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.