*ಗೋಣಿಕೊಪ್ಪ, ನ. ೨: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ತಿತಿಮತಿ ಕೆನರಾ ಬ್ಯಾಂಕಿಗೆ ಬೆಂಕಿ ಹತ್ತಿಕೊಂಡು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

ಬ್ಯಾಂಕಿನ ಪೀಠೋಪಕರಣಗಳು, ಗಣಕ ಯಂತ್ರಗಳು, ವ್ಯವಸ್ಥಾಪಕರ ಕೊಠಡಿಗಳು ಬೆಂಕಿಗೆ ಆಹುತಿಯಾಗಿದೆ.

ಮಂಗಳವಾರ ಬೆಳಿಗ್ಗೆ ೫ ಗಂಟೆಗೆ ಬ್ಯಾಂಕಿನ ಕರೆಗಂಟೆ ಎಚ್ಚರಿಕೆಯ ಶಬ್ದ ಬಂದ ಹಿನ್ನೆಲೆ ವಾಯುವಿಹಾರಕ್ಕೆ ತೆರಳುತ್ತಿದ್ದವರಿಗೆ ಬ್ಯಾಂಕಿನೆಡೆಗೆ ದೃಷ್ಟಿ ಹಾಯಿಸಲು ಸಾಧ್ಯವಾಗಿದೆ. ವಾಯುವಿಹಾರಕ್ಕೆ ತೆರಳುತ್ತಿದ್ದ ಸ್ಥಳೀಯ ಮಸೀದಿಯ ಧರ್ಮಗುರು ರಫೀಕ್ ಅವರಿಗೆ ಬ್ಯಾಂಕಿನಲ್ಲಿ ಹೊಗೆ ಎದ್ದಿರುವುದು ಕಾಣಿಸಿಕೊಂಡಿದೆ. ತಕ್ಷಣವೇ ಸ್ಥಳೀಯ ಗ್ರಾ.ಪಂ. ಸದಸ್ಯ ಅನೂಪ್‌ಕುಮಾರ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಸದಸ್ಯರು ಬ್ಯಾಂಕಿನ ವ್ಯವಸ್ಥಾಪಕರಿಗೆ ತಕ್ಷಣವೇ ಮಾಹಿತಿ ನೀಡಿದ ಹಿನ್ನೆಲೆ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗುವ ಅಪಾಯವನ್ನು ತಪ್ಪಿಸಲು ಸಾಧ್ಯವಾಯಿತು. ಮಾಹಿತಿ ಆದರಿಸಿ ತಕ್ಷಣ ಸ್ಥಳಕ್ಕೆ ಆಗಮಿಸಿದ ಬ್ಯಾಂಕಿನ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಬ್ಯಾಂಕಿನ ಮುಂಬಾಗಿಲು ತೆಗೆದಾಗ ಒಳ ಕೋಣೆಗಳಲ್ಲಿ ಹೊಗೆ ಹಬ್ಬಿಕೊಂಡಿರುವುದು ಗೋಚರಿಸಿದೆ.

ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದರು. ಬ್ಯಾಂಕಿನ ಮೇಲ್ಭ್ಬಾಗದಲ್ಲಿ ಮೂರು ಕುಟುಂಬಗಳು ಹಾಗೂ ಸಮೀಪದಲ್ಲಿ ಒಂದು ಕುಟುಂಬ ವಾಸಿ ಸುತ್ತಿದ್ದು, ಆಕಸ್ಮಿಕ ಬೆಂಕಿ ಹತ್ತಿಕೊಂಡ ಘಟನೆಯಿಂದ ಸಂಭವಿ ಸಬಹುದಾದ ಅಪಾಯದಿಂದ ಪಾರಾಗಿದ್ದಾರೆ. ಇತ್ತೀಚೆಗೆ ತಿತಿಮತಿ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು, ತಕ್ಷಣ ಪವರ್ ಹೆಚ್ಚಾಗುವ ಕಾರಣಗಳಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ಗಳಿಗೆ ಕಾರಣವಾಗಿರಬಹುದು ಅಥವಾ ಕಳಪೆ ವೈಯರಿಂಗ್ ಕೂಡ ಅಪಾಯ ಸಂಭವಿಸಲು ಕಾರಣವಾಗಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ.