ಕುಶಾಲನಗರ, ನ. ೨: ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಎಪಿಸಿಎಂಎಸ್) ಈ ಸಾಲಿನಲ್ಲಿ ೧೫.೭೫ ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಎನ್. ಕೊಮಾರಪ್ಪ ತಿಳಿಸಿದ್ದಾರೆ.

ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಕಳೆದ ೭೭ ವರ್ಷಗಳ ಅವಧಿಯಲ್ಲಿ ತನ್ನ ಸದಸ್ಯರಿಗೆ ಉತ್ತಮ ಸೇವೆ ನೀಡಿಕೊಂಡು ಬಂದಿರುವ ಸಂಘದಲ್ಲಿ ೧೭೪೪ ಮಂದಿ ಸದಸ್ಯರಿದ್ದು ಈ ಸಾಲಿನಲ್ಲಿ ಒಟ್ಟು ೭೯.೬೮ ಕೋಟಿ ರೂ. ವಹಿವಾಟು ನಡೆಸಲಾಗಿದೆ. ಶುಂಠಿಕೊಪ್ಪ ಮತ್ತು ಕುಶಾಲನಗರ ಹೋಬಳಿಗಳಿಗೆ ಸೀಮಿತವಾಗಿರುವ ಸಂಘ ಸೋಮವಾರ ಪೇಟೆ ತಾಲೂಕಿನ ಪಡಿತರ ಸಗಟು ನಾಮಿನಿಯಾಗಿ ಕಾರ್ಯನಿರ್ವಹಿಸುತ್ತಿದೆ. ೧೦೦ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ವಿತರಣೆ ಮಾಡುತ್ತಿದೆ ಎಂದು ತಿಳಿಸಿದ ಕುಮಾರಪ್ಪ, ಸಂಘ ಕುಶಾಲನಗರದಲ್ಲಿ ವ್ಯಾಪಾರ ಸಂಕೀರ್ಣ ಹೊಂದಿದ್ದು ಗ್ರಾಹಕರ ಶಾಖೆ, ಸ್ಟೇಷನರಿ, ಗೊಬ್ಬರ ಕ್ರಿಮಿನಾಶಕ, ಬಿತ್ತನೆ ಬೀಜ ಕೋವಿತೋಟಾ, ಜನತಾ ಬಜಾರ್ ಮೆಡಿಕಲ್ಸ್ ಮತ್ತು ೨ ಸುಸಜ್ಜಿತ ಸಭಾಂಗಣ ಹತ್ತು ವಸತಿಗೃಹಗಳನ್ನು ಹೊಂದಿದೆ. ಜತೆಗೆ ಬ್ಯಾಂಕಿAಗ್ ವ್ಯವಸ್ಥೆ ಕೂಡ ನಡೆಸುತ್ತಿದೆ ಎಂದು ವಿವರಿಸಿದರು.

ಕೊರೊನಾ ಹಿನ್ನೆಲೆಯಲ್ಲಿ ಈ ಸಾಲಿನಲ್ಲಿ ಆದಾಯ ಕೊರತೆ ಉಂಟಾಗಿದೆ, ಈ ಕಾರಣದಿಂದ ಲಾಭಾಂಶ ಕೂಡ ಕಡಿಮೆಯಾಗಿದೆ ಎಂದು ಹೇಳಿದರು.

೨೦೨೦-೨೧ನೇ ಸಾಲಿನ ಪ್ರಗತಿಗೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಂದ ಈ ಬಾರಿಯ ವಾರ್ಷಿಕ ಮಹಾಸಭೆಯಲ್ಲಿ ಪ್ರಥಮ ಬಹುಮಾನ ಸಂಘಕ್ಕೆ ಲಭಿಸಿದೆ ಈ ಸಾಲಿನಲ್ಲಿ ಸದಸ್ಯರಿಗೆ ಶೇಕಡಾ ೧೫ ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದರು.

ಕೊರೊನಾ ಅವಧಿಯಲ್ಲಿ ಸಂಘದ ರೈತ ಸಹಕಾರ ಭವನವನ್ನು ಆರೋಗ್ಯ ಇಲಾಖೆಗೆ ಲಸಿಕಾ ಕೇಂದ್ರದ ಪ್ರಯೋಜನಕ್ಕಾಗಿ ಉಚಿತವಾಗಿ ನೀಡಿ ಎಲ್ಲಾ ರೀತಿಯ ಸಹಕಾರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

೨೦೨೦-೨೧ರ ಸಾಲಿನ ೭೦ನೇ ವಾರ್ಷಿಕ ಮಹಾಸಭೆ ತಾ. ೬ ರಂದು ಸಂಘದ ಅಧ್ಯಕ್ಷರಾದ ಎಂ.ಎನ್. ಕೊಮಾರಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಂ. ಪಾರ್ವತಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಟಿ.ಬಿ. ಜಗದೀಶ್, ನಿರ್ದೇಶಕರಾದ ಕೆ.ಎಂ. ಪ್ರಸನ್ನ, ಎ.ಪಿ. ನೀಲಮ್ಮ, ಹೆಚ್.ಟಿ. ನಾಗೇಶ್, ಪಿ.ಪಿ. ತಿಲಕ್ ಕುಮಾರ್, ದೊಡ್ಡಯ್ಯ, ಮೋಹನ್, ಸಿ.ಜಿ. ಲತಾ, ಮಹಮ್ಮದ್ ಇದ್ದರು.