ಮಡಿಕೇರಿ, ನ. ೧: ಅಣ್ಣನ ಮಗನ ಮೇಲೆ ಚಿಕ್ಕಪ್ಪ ಗುಂಡು ಹಾರಿಸಿದ ಘಟನೆ ಕಾಲೂರು ಸಮೀಪದ ದೇವಸ್ತೂರಿನಲ್ಲಿ ನಡೆದಿದೆ.
ಗ್ರಾಮದ ಸುಜಿತ್ (೨೬) ಗುಂಡಿನ ದಾಳಿಗೆ ಒಳಗಾಗಿ ಇದೀಗ ಚಿಕಿತ್ಸೆ ಪಡೆಯುತ್ತಿದ್ದು, ಆತನ ಚಿಕ್ಕಪ್ಪ ಆರೋಪಿ ಬಾಣೆಗದ್ದೆ ಭೀಮಯ್ಯ (೬೩) ಪೊಲೀಸರ ವಶದಲ್ಲಿದ್ದಾರೆ.
ತನ್ನ ಸ್ನೇಹಿತರೊಂದಿಗೆ ಮನೆಯ ಬಳಿ ಸುಜಿತ್ ಮಾತನಾಡುತ್ತಿದ್ದ ಸಂದರ್ಭ ಸ್ಥಳಕ್ಕೆ ಬಂದ ಆರೋಪಿ ಭೀಮಯ್ಯ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದನ್ನು ಸುಜಿತ್ ಪ್ರಶ್ನಿಸಿದಾಗ ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ. ಈ ಸಂದರ್ಭ ನಿನಗೂ ಗುಂಡು ಹಾರಿಸುತ್ತೇನೆ ಎಂದು ಭೀಮಯ್ಯ ಹೇಳಿದ್ದು, ಸುಜಿತ್ ಅಷ್ಟೊಂದು ಧೈರ್ಯ ಇದೆಯಾ ಎಂದು ಪ್ರಶ್ನಿಸಿ ಸುಮ್ಮನಾಗಿದ್ದಾನೆ. ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ ಸಂದರ್ಭ ಭೀಮಯ್ಯ ತನ್ನ ಕೋವಿಯಿಂದ ಇದ್ದಕ್ಕಿದ್ದಂತೆ ಸುಜಿತ್ ಬೆನ್ನಿನ ಭಾಗಕ್ಕೆ ಗುಂಡು ಹೊಡೆದಿದ್ದಾರೆ. ಕುಸಿದು ಬಿದ್ದ ಗಾಯಾಳುವನ್ನು ತಕ್ಷಣ ಮಡಿಕೇರಿಯ ಅಶ್ವಿನಿ ಆಸ್ಪತ್ರೆಗೆ ಸ್ನೇಹಿತರು ದಾಖಲಿಸಿದರು.
ಪ್ರಥಮ ಚಿಕಿತ್ಸೆ ಬಳಿಕ ಸುಜಿತ್ ಅನ್ನು ಮೈಸೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಯಿತು. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.