ಮಡಿಕೇರಿ, ನ. ೧: ಕೊಡ್ಲಿಪೇಟೆ ವಿದ್ಯಾಸಂಸ್ಥೆಯಲ್ಲಿ ಡಿಸೆಂಬರ್ ೧೨ ರಂದು ಬೃಹತ್ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ ಎಂದು ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಎಸ್. ಚಂದ್ರಮೌಳಿ ಹೇಳಿದ್ದಾರೆ.
ಕೊಡ್ಲಿಪೇಟೆ ವಿದ್ಯಾಸಂಸ್ಥೆ, ಹಲಸಿನಮರದ ಶ್ರೀಮತಿ ಗೌರಮ್ಮ ಮತ್ತು ಶ್ರೀ ಶಾಂತಮಲ್ಲಪ್ಪ ಪದವಿ ಪೂರ್ವ ಕಾಲೇಜು ಹಾಗೂ ಕೊಡ್ಲಿಪೇಟೆ ಜನಪರ ವೇದಿಕೆ ಸಂಯುಕ್ತಾಶ್ರಯದಲ್ಲಿ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿ ಯಲ್ಲಿ ಮಾಹಿತಿ ನೀಡಿದರು.
ಮದುವೆಯೆಂಬುದು ಕೇವಲ ಸಡಗರ ಮಾತ್ರ ಅಲ್ಲ. ಅದೊಂದು ಸುದೀರ್ಘ ಬಾಳ ಪಯಣ. ಇಂದಿನ ಸಾಮಾಜಿಕ ಸ್ಥಿತಿ ತೀರ ಶೋಚನೀಯ. ಕೊರೊನಾ ಪಿಡುಗಿನೊಂದಿಗೆ ದಿನನಿತ್ಯದ ಬದುಕು ದುಬಾರಿಯಾಗುತ್ತಿದೆ. ಪ್ರಸ್ತುತ ಸನ್ನಿವೇಶವನ್ನು ನಾವೆಲ್ಲರು ಒಟ್ಟಾಗಿ ಎದುರಿಸಬೇಕಾಗಿದೆ. ಮದುವೆಯೆಂಬುದು ಅದ್ಧೂರಿ ಮತ್ತು ಆಡಂಬರಗಳಾಗದೆ ಸರಳ, ಸಂತಸದ ಕ್ಷಣಗಳಾಗಬೇಕು. ನಮ್ಮಗಳ ಮತ್ತು ನಮ್ಮ ಮಕ್ಕಳಿಗೆ ಹೊರೆಯಾಗಬಾರದು. ಈ ನಿಟ್ಟಿನಲ್ಲಿ ಜನ ಕಲ್ಯಾಣ ಮಹೋತ್ಸವ ಶೀರ್ಷಿಕೆ ಯಡಿ ಸಾಮೂಹಿಕ ಮದುವೆ, ಸಹಪಂಕ್ತಿ ಭೋಜನ ಆಯೋಜಿಸಲಾಗಿದೆ ಎಂದರು.
ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮಿ, ಆದಿಚುಂಚನಗಿರಿ ಮಠದ ನಿರ್ಮಲಾ ನಂದನಾಥ ಸ್ವಾಮಿ ಸಾನಿಧ್ಯ ವಹಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಲಹೆ, ಸಹಕಾರ ದೊಂದಿಗೆ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ.
ವಧು- ವರರಿಗೆ ಧೋತಿ, ಪೇಟ, ಸೀರೆ, ರವಿಕೆ ಕಣ ಹಾಗೂ ಚಿನ್ನದ ಮಾಂಗಲ್ಯ ಉಚಿತವಾಗಿ ನೀಡಲಾಗುತ್ತದೆ. ವರನಿಗೆ ೨೧ ವರ್ಷ ಹಾಗೂ ವಧುವಿಗೆ ೧೮ ವರ್ಷ ತುಂಬಿರಬೇಕು. ಜನ್ಮ ದಿನಾಂಕ ಪ್ರಮಾಣ ಪತ್ರ ಕಡ್ಡಾಯವಾಗಿ ಸಲ್ಲಿಸಬೇಕು. ಎರಡೂ ಕಡೆಯ ಪಾಲಕರು ಒಪ್ಪಿಗೆ ಇದ್ದು, ಅವರು ಖುದ್ದು ಹಾಜರಿರಬೇಕು. ಹತ್ತಿರದ ಬಂಧುಗಳು ಸಾಕ್ಷಿದಾರರಾಗಿ ಬರಬೇಕು.
ವಿವಾಹದ ಧಾರ್ಮಿಕ ವಿಧಿ ವಿಧಾನಗಳಿಗೆ ಬೇಕಾದ ಎಲ್ಲಾ ಸವಲತ್ತು, ಹಾರ ಸಹಿತ
(ಮೊದಲ ಪುಟದಿಂದ) ಸಂಸ್ಥೆಯಿAದ ಒದಗಿಸಲಾಗು ವುದು.
ವಿವಾಹಕ್ಕೆ ಹೆಸರು ನೋಂದಾಯಿಸುವವರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಿಂದ ಹೆಸರು, ಪ್ರಾಯ, ವಾಸದ ಸ್ಥಳ, ಸಂಪೂರ್ಣ ವಿಳಾಸ, ಹಿರಿಯರ ಒಪ್ಪಿಗೆ ಹಾಗೂ ಅವಿವಾಹಿತ ಎಂಬುದಕ್ಕೆ ಅವಶ್ಯಕ ದೃಢೀಕರಣ ಪತ್ರ ತಪ್ಪದೇ ಹಾಜರು ಪಡಿಸಬೇಕು. ದೃಢೀಕರಣ ಪತ್ರದಲ್ಲಿ ಇತ್ತೀಚಿನ ಭಾವಚಿತ್ರ ಮತ್ತು ಭಾವಚಿತ್ರದ ಮೇಲೆ ಪಿಡಿಒ ಸಹಿ, ಸೀಲು ಮತ್ತು ದಿನಾಂಕ ಸರಿಯಾಗಿ ನಮೂದಿಸಬೇಕು. ವಧು- ವರರ ಕುಟುಂಬದ ಮಾಹಿತಿಗಾಗಿ ಪಡಿತರ ಚೀಟಿಯ ನಕಲು ಮತ್ತು ಆಧಾರ್ ಕಾರ್ಡ್ ನಕಲು ಹಾಜರು ಪಡಿಸಬೇಕು. ಯಾವುದೇ ರೀತಿಯ ತಂಟೆ- ತಕರಾರು ಬಂದಲ್ಲಿ ಸಂಸ್ಥೆಯ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದಿದ್ದಾರೆ. ಆದರ್ಶ ವಿವಾಹ ಮಾರ್ಗಸೂಚಿಯಂತೆ ಸಾಮೂಹಿಕ ವಿವಾಹವಾಗುವ ದಂಪತಿಗಳಲ್ಲಿ ವಧುವಿನ ಹೆಸರಿಗೆ ೧೦ ಸಾವಿರ ಎರಡು ವರ್ಷ ಅವಧಿಗೆ ಠೇವಣಿ ರೂಪದಲ್ಲಿ ಸರ್ಕಾರದಿಂದ ಜಮೆ ಮಾಡಲಾಗುತ್ತದೆ. ಸರ್ಕಾರದಿಂದ ಆದರ್ಶ ವಿವಾಹ ಯೋಜನೆಯ ಮಾರ್ಗಸೂಚಿಯಂತೆ ಸಿಗುವ ಎಲ್ಲಾ ಸೌಲಭ್ಯ ಪಡೆದುಕೊಳ್ಳಬಹುದು.
ಸಾಮೂಹಿಕ ವಿವಾಹ ನಂತರ ವಿವಾಹ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದರು. ಅಪ್ರಾಪ್ತ ವಯಸ್ಕರ ಮದುವೆಗೆ ಅವಕಾಶವಿರುವುದಿಲ್ಲ. ಯಾವುದೇ ಕಾರಣಕ್ಕೂ ೨ನೇ ವಿವಾಹಕ್ಕೆ ಅವಕಾಶವಿರುವುದಿಲ್ಲ. ಕೋವಿಡ್ ನಿಯಮ ಕಡ್ಡಾಯವಾಗಿ ಪಾಲಿಸಬೇಕು. ಗೋಷ್ಠಿಯಲ್ಲಿ ಡಾ.ಉದಯಕುಮಾರ್, ಜಾನ್ ಡಿಸೋಜ, ಡಿ.ಎಚ್. ಮಂಜುನಾಥ್, ಸುಲೇಮಾನ್, ಚಂದ್ರಶೇಖರ್ ಇದ್ದರು.