ಸ್ತಾAತರ
ಮಡಿಕೇರಿ, ನ. ೧: ಅಮೂಲ್ಯ ವಸ್ತುಗಳು, ಪುರಾತನ ಸಾಮಗ್ರಿಗಳು, ಕಳೆದುಹೋದ ವಾಹನಗಳು ವಿಳಂಬವಾದರೂ ಅವುಗಳ ವಾರೀಸುದಾರರಿಗೆ ಸಿಗುತ್ತದೆ ಎಂದರೆ ಅದು ಒಂದು ಅದೃಷ್ಟದ ವಿದ್ಯಮಾನವೆನ್ನಬಹುದು. ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯ ಅನೇಕರ ಅಮೂಲ್ಯ ವಸ್ತುಗಳು ಕಳವಾಗಿದ್ದು, ಇದೀಗ ಅವರಿಗೆ ಹಸ್ತಾಂತರವಾಗಿದೆ ಎಂದರೆ ಜಿಲ್ಲೆಯ ಪೊಲೀಸರ ಪರಿಶ್ರಮಕ್ಕೆ ಸಂದ ಜಯ ಎಂದರೆ ಅತಿಶಯೋಕ್ತಿಯಲ್ಲ. ಕಳ್ಳರ ಪಾಲಾಗಿದ್ದ ಸಾಮಗ್ರಿಗಳು ಮತ್ತೆ ನೈಜ ಮಾಲೀಕರ ಬಳಿ ಸೇರಿದಾಗ ಅವರಿಗಾದ ಆನಂದ ಅಪರಿಮಿತ. ಇಂತಹ ಒಂದು ವಿಶೇಷ ಸನ್ನಿವೇಶದ ಕುರಿತು ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಕೊಡಗು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ೧೪ ಕಳ್ಳತನ ಪ್ರಕರಣದಲ್ಲಿ ವಶಪಡಿಸಿಕೊಂಡ ಸ್ವತ್ತುಗಳನ್ನು ಕಳೆದುಕೊಂಡವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಹಸ್ತಾಂತರಿಸಿದರು.
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ೩ ಪ್ರಕರಣ ಸೇರಿದಂತೆ ಸೋಮವಾರಪೇಟೆ ವ್ಯಾಪ್ತಿಯ ೬, ಶನಿವಾರಸಂತೆ ವ್ಯಾಪ್ತಿಯ ೩, ವೀರಾಜಪೇಟೆ ಹಾಗೂ ಗೋಣಿಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ತಲಾ ೧ ಪ್ರಕರಣಗಳನ್ನು ಬೇಧಿಸಿದ ಪೊಲೀಸರು ಒಟ್ಟು ೩೧.೬೭ ಲಕ್ಷ ಮೌಲ್ಯದ ೪೦೧ ಗ್ರಾಂ ಚಿನ್ನಾಭರಣ, ರೂ. ೧,೧೯,೫೦೦ ನಗದು, ಸುಮಾರು ರೂ. ೨.೭೪ ಲಕ್ಷ ಬೆಲೆ ಬಾಳುವ ಮೋಟರ್ ಸೈಕಲ್, ಸುಮಾರು ರೂ. ೬.೮೬ ಲಕ್ಷ ಮೌಲ್ಯದ ಕಾರು ಹಾಗೂ
(ಮೊದಲ ಪುಟದಿಂದ) ಇತರ ರೂ. ೪೨,೪೬,೫೦೦ ಒಟ್ಟು ಮೌಲ್ಯದ ವಸ್ತುಗಳನ್ನು ಕಳೆದುಕೊಂಡವರಿಗೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಹಸ್ತಾಂತರಿಸಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಪಿ. ಕ್ಷಮಾ ಮಿಶ್ರಾ, ಕಳೆದ ೨ ವರ್ಷಗಳಿಂದ ನಡೆದಿದ್ದ ೧೪ ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದು, ಕಳ್ಳರಿಂದ ಬಹುತೇಕ ಮಾಲನ್ನು ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಚಿನ್ನ, ನಗದು ಅಲ್ಲದೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಪುರಾತನ ವಸ್ತುಗಳ ಕಳ್ಳತನವಾಗಿತ್ತು. ಅದನ್ನು ಕೂಡ ಹಿಂದಿರುಗಿಸಲಾಗಿದೆ. ಕಳ್ಳತನದ ಒಟ್ಟು ಮೌಲ್ಯ ೮೪.೯೩ ಲಕ್ಷ ಆಗಿದೆ ಎಂದು ಮಾಹಿತಿ ನೀಡಿದರು.
ಅರಮೇರಿಯ ರೇವತಿ ಮಾತನಾಡಿ, ಕೆಲವು ತಿಂಗಳುಗಳ ಹಿಂದೆ ಮನೆಯಿಂದ ಚಿನ್ನಾಭರಣ ಕಳವಾಗಿತ್ತು. ಈ ಬಗ್ಗೆ ದೂರು ದಾಖಲು ಮಾಡಿದ್ದೆವು. ಪೊಲೀಸರು ಎಲ್ಲವನ್ನೂ ಹಿಂದುರಿಗಿಸಿ ನೀಡಿದ್ದಾರೆ. ಪಕ್ಕದ ಮನೆಯವನು ಕಳ್ಳತನ ಮಾಡಿರುವುದು ತನಿಖೆ ವೇಳೆ ತಿಳಿದು ಬಂತು ಎಂದರು.
ಈ ಸಂದರ್ಭ ಸೋಮವಾರಪೇಟೆ ಉಪವಿಭಾಗದ ಅಧೀಕ್ಷಕ ಶೈಲೇಂದ್ರ, ಮಡಿಕೇರಿ ಉಪವಿಭಾಗದ ಅಧೀಕ್ಷಕ ಗಜೇಂದ್ರ ಪ್ರಸಾದ್, ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್, ಮಡಿಕೇರಿ ನಗರ ವೃತ್ತ ನಿರೀಕ್ಷಕ ವೆಂಕಟೇಶ್, ವೀರಾಜಪೇಟೆ ವೃತ್ತ ನಿರೀಕ್ಷಕ ಶ್ರೀಧರ್, ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಂ, ಶನಿವಾರಸಂತೆ ಉಪನಿರೀಕ್ಷಕ ಪರಶಿವಮೂರ್ತಿ, ಮಡಿಕೇರಿ ಗ್ರಾಮಾಂತರ ಉಪನಿರೀಕ್ಷಕ ರವಿಕಿರಣ್ ಇದ್ದರು.