ಸಿದ್ದಾಪುರ, ನ. ೧: ಮಾಲ್ದಾರೆ ಗ್ರಾಮದ ಮಾಲ್ದಾರೆ, ಬಾಡಗ, ಬಾಣಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ನ ಸಭಾಂಗಣದಲ್ಲಿ ಚೈಲ್ಡ್ಲೈನ್ ಮಕ್ಕಳ ಸಹಾಯವಾಣಿ ಘಟಕದ ವತಿಯಿಂದ ಮಕ್ಕಳ ಲೈಂಗಿಕ ದೌರ್ಜನ್ಯ ಕುರಿತು ಮಾಲ್ದಾರೆ ಪ್ರೌಢಶಾಲೆ ಮಕ್ಕಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ತೆರೆದ ಮನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪೊಲೀಸ್ ಇಲಾಖಾ ವತಿಯಿಂದ ೧೧೨ ಜನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಸಭೆಯಲ್ಲಿ ಮಾಲ್ದಾರೆ ಗ್ರಾಮ ಪಂಚಾಯಿತಿ ಪಿಡಿಓ ರಾಜೇಶ್ ಮಕ್ಕಳಿಗೆ ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ಮಾತನಾಡಿದರು. ಸಿದ್ದಾಪುರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಾದ ಪಿ. ಮೋಹನ್ ರಾಜು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಬಾಲಕಾರ್ಮಿಕ ಪದ್ಧತಿ ಹಾಗೂ ಇಆರ್ಎಸ್ಎಸ್ ೧೧೨ರ ಬಗ್ಗೆ ಮಾಹಿತಿ ನೀಡಿದರು. ಸಿದ್ದಾಪುರ ಪೊಲೀಸ್ ಠಾಣಾ ಸಿಬ್ಬಂದಿ ಮಲ್ಲಪ್ಪ ಮುಶಿಗೇರಿ ಅವರು ಪೋಕ್ಸೊ ಕಾಯ್ದೆಯ ಕುರಿತು ಅರಿವು ಮೂಡಿಸಿದರು.
ಮಕ್ಕಳ ಸಹಾಯವಾಣಿ ಘಟಕದ ಅಧಿಕಾರಿ ಶೋಭಾಲಕ್ಷ್ಮೀ ವಿ.ಎನ್. ಮಕ್ಕಳ ಸಹಾಯವಾಣಿ ೧೦೯೮ ರ ಬಗ್ಗೆ, ಮಕ್ಕಳಿಗೆ ಸಮಸ್ಯೆ ಕಂಡು ಬಂದಲ್ಲಿ ಕರೆಮಾಡಿ ಮಾಹಿತಿ ನೀಡಿ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಸಭೆಯಲ್ಲಿ ಮಾಲ್ದಾರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸಮೀರ್ ಹಾಜರಿದ್ದು ಸಭೆಯನ್ನುದ್ದೇಶಿಸಿ ಮಾತನಾಡಿದರು ಹಾಗೂ ಮಾಲ್ದಾರೆ ಸರಕಾರಿ ಪ್ರೌಢ ಶಾಲೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.