ಮಡಿಕೇರಿ, ನ.೨ : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ಮೂಲಕ ಜಿಲ್ಲಾಡಳಿತ ಗಣನೀಯ ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ. ಆದರೆ ಕೊಡಗು ಜಿಲ್ಲಾಡಳಿತ ಕಳೆದ ೯ ವರ್ಷಗಳಿಂದ ರಾಜ್ಯೋತ್ಸವ ಪ್ರಶಸ್ತಿ ನೀಡುವುದನ್ನೇ ಮರೆತಿದ್ದು, ಇದರಿಂದ ಸಾಧಕರಿಗೆ ಅವಮಾನವಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಹಾಗೂ ೨೦೧೨ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಿ.ಎಂ.ರವಿ ಬೇಸರ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜಿಲ್ಲೆಯಲ್ಲಿ ಕಲೆ, ಸಾಹಿತ್ಯ, ಕ್ರೀಡೆ, ರಂಗಭೂಮಿ, ಜಾನಪದ, ಸಂಗೀತ, ಸಿನಿಮಾ, ಶಿಕ್ಷಣ, ಕೃಷಿ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳÀಲ್ಲಿ ಸಾಧನೆ ಮಾಡಿರುವವರ ಸಂಖ್ಯೆ ಬಹಳಷ್ಟಿದೆ. ಆದರೆ ಜಿಲ್ಲಾಡಳಿತ ಈ ಸಾಧಕರನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡದೆ ಇರುವುದನ್ನು ಗಮನಿಸಿದರೆ ಕೊಡಗು ಸಾಧಕರಿಲ್ಲದ ಜಿಲ್ಲೆಯೇ. ಅಥವಾ ಇಲ್ಲಿನ ಪ್ರತಿಭೆಗಳಿಗೆ ಪ್ರಶಸ್ತಿ ಪಡೆಯುವ ಅರ್ಹತೆ ಇಲ್ಲವೇ ಎನ್ನುವ ಸಂಶಯ ವ್ಯಕ್ತವಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರಕಾರ ಪ್ರತಿವರ್ಷ ನೀಡುವ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯಿಂದ ಆಯ್ಕೆಯಾಗುವ ಸಾಧಕರ ಸಂಖ್ಯೆ ಕಡಿಮೆಯಾಗುತ್ತಿದೆ. ಜಿಲ್ಲಾಡಳಿತ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರನ್ನು ಗುರುತಿಸಿ ಸನ್ಮಾನಿಸಿದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆಯಲು ಪ್ರೇರಣೆಯಾಗುತ್ತದೆ. ಈ ಪ್ರಶಸ್ತಿ ಮೈಲಿಗಲ್ಲಾಗಲಿದೆ ಎಂಬುದನ್ನು ಜಿಲ್ಲಾಡಳಿತ ಅರಿತುಕೊಳ್ಳಬೇಕಿದೆ ಎಂದು ರವಿ ಹೇಳಿದ್ದಾರೆ.