ಬೆಂಗಳೂರು, ಅ. ೩೧: ಒಂದೆಡೆ ಲಕ್ಷಾಂತರ ಅಭಿಮಾನಿಗಳ ಆಕ್ರಂದನ, ಮತ್ತೊಂದೆಡೆ ಕುಟುಂಬಸ್ಥರ ರೋಧನದ ನಡುವೆ ಕರುನಾಡ ರಾಜಕುಮಾರ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಇಂದು ಮಣ್ಣಲ್ಲಿ ಮಣ್ಣಾದರು. ತಾ. ೨೯ ರಂದು ಹೃದಯಸ್ತಂಭನದಿAದ ಹಠಾತ್ತನೆ ಕೊನೆಯುಸಿರೆಳೆದ ಪುನೀತ್ ರಾಜ್‌ಕುಮಾರ್ ಅವರ ಮೃತದೇಹ ವನ್ನು ಕಂಠೀರವ ಕ್ರೀಡಾಂಗಣದಲ್ಲಿ ಅಭಿಮಾನಿಗಳ ದರ್ಶನಕ್ಕಾಗಿ ಇಂದು ಬೆಳಿಗ್ಗೆ ಸುಮಾರು ೪ ಗಂಟೆವರೆಗೂ ಇಡಲಾಗಿತ್ತು.

೪ ಗಂಟೆಯ ಬಳಿಕ ಕಂಠೀರವ ಸ್ಟುಡಿಯೋವರೆಗೂ ಪಾರ್ಥಿವ ಶರೀರವನ್ನು ಅಂತಿಮಯಾತ್ರೆ ಮೂಲಕ ತರಲಾಯಿತು. ಅಲ್ಲಿ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಿದ ಬಳಿಕ ಪುನೀತ್‌ರಾಜ್‌ಕುಮಾರ್ ಪಾರ್ಥಿವ ಶರೀರಕ್ಕೆ ಹೊದಿಸಲಾಗಿದ್ದ ರಾಷ್ಟçಧ್ವಜವನ್ನು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಪುನೀತ್ ಅವರ ಪತ್ನಿ ಅಶ್ವಿನಿಯವರಿಗೆ ಹಸ್ತಾಂತರಿಸಿದರು.

ಪುನೀತ್ ಅವರಿಗೆ ಪುತ್ರರಿಲ್ಲದ ಕಾರಣ ಸಹೋದರ ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಘವೇಂದ್ರ ರಾಜ್‌ಕುಮಾರ್ ಅಂತಿಮ ವಿಧಿವಿಧಾನ ನೆರವೇರಿಸಿದರು. ತಂದೆ ವರನಟ ಡಾ. ರಾಜ್‌ಕುಮಾರ್ ತಾಯಿ ಪಾರ್ವತಮ್ಮ ರಾಜ್‌ಕುಮಾರ್ ಸಮಾಧಿ ಬಳಿಯೇ ಪುನೀತ್ ರಾಜ್‌ಕುಮಾರ್ ಅಂತ್ಯಸAಸ್ಕಾರವನ್ನು ನೆರವೇರಿಸ ಲಾಯಿತು. ಅಂತ್ಯಕ್ರಿಯೆಯಲ್ಲಿ ಕುಟುಂಬಸ್ಥರು, ರಾಜಕೀಯ ಹಾಗೂ ಚಲನಚಿತ್ರರಂಗದ ಗಣ್ಯರು ಪಾಲ್ಗೊಂಡಿದ್ದರು. ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ವೇಳೆ ಅಭಿಮಾನಿಗಳಿಗೆ ಪ್ರವೇಶಾವಕಾಶ ವಿರಲಿಲ್ಲ. ಅಲ್ಲದೆ ಅಂತ್ಯಕ್ರಿಯೆ ಬಳಿಕವೂ ಅಭಿಮಾನಿಗಳಿಗೆ ಕಂಠೀರವ ಸ್ಟುಡಿಯೋ ಒಳಭಾಗಕ್ಕೆ ಪ್ರವೇಶವನ್ನು ನಿಷೇಧಿಸಲಾಗಿದೆ. ಹಾಲು ತುಪ್ಪದ ಕಾರ್ಯದ ಬಳಿಕ ಸಮಾಧಿ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. ಹೀಗಿದ್ದರೂ ಕೂಡ ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿರುವ ಸಾಕಷ್ಟು ಅಭಿಮಾನಿಗಳು ಅಪ್ಪು ಸಮಾಧಿಯ ದರುಶನ ಪಡೆದೇ ತೆರಳುತ್ತೇವೆ ಎಂದು ಬೆಂಗಳೂರಿನಲ್ಲೇ ಉಳಿದು ಕೊಂಡಿದ್ದಾರೆ.

ಧನ್ಯವಾದ ಹೇಳಿದ ಸಿಎಂ

ಪುನೀತ್ ಅವರು ಸಾವನ್ನಪ್ಪಿದ ವೇಳೆ ಹಾಗೂ ಅಂತ್ಯಕ್ರಿಯೆ ಸಂದರ್ಭದಲ್ಲಿ ಶಾಂತರೀತಿಯಲ್ಲಿ ಸಹಕರಿಸಿದ ಸರ್ವರಿಗೂ ಧನ್ಯವಾದ ಸಲ್ಲಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅಂತ್ಯ ಕ್ರಿಯೆಗೂ ಮುನ್ನ ಸಿಎಂ ಬಸವರಾಜ ಬೊಮ್ಮಾಯಿ ಪುನೀತ್ ಹಣೆಗೆ ಮುತ್ತಿಟ್ಟು ಕಂಬನಿ ಮಿಡಿದರು.

ಅಂತ್ಯಕ್ರಿಯೆ ಬಳಿಕ ಮಾಧ್ಯಮ ಗಳೊಂದಿಗೆ ಮಾತನಾಡಿದ ಪುನೀತ್ ರಾಜ್‌ಕುಮಾರ್ ಹಿರಿಯ ಸಹೋದರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಪ್ಪು ಸಾವನ್ನಪ್ಪಿದ ಸಂದರ್ಭ ಹಾಗೂ ಅಂತ್ಯಕ್ರಿಯೆ ವೇಳೆ ಹಾಜರಿದ್ದು, ಶಾಂತರೀತಿಯಲ್ಲಿ ಸಹಕರಿಸಿದ ಅಭಿಮಾನಿಗಳಿಗೆ, ಪೊಲೀಸ್ ಇಲಾಖೆಗೆ ಸೇರಿದಂತೆ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸಿದರು. ಪುನೀತ್ ಅಗಲಿಕೆಯ ನೋವಿನಿಂದ ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗದಂತೆ ಮನವಿ ಮಾಡಿದರು. ಪ್ರತಿಯೊಬ್ಬರಿಗೂ ಕುಟುಂಬ ಎಂಬುದಿದೆ, ದಯವಿಟ್ಟು ಆತ್ಮಹತ್ಯೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮಂತೆಯೇ ನಮಗೂ ನೋವಿದೆ. ಮಗುವನ್ನು ಕಳೆದುಕೊಂಡಷ್ಟು ಬೇಸರವಿದೆ. ಅಭಿಮಾನಿಗಳು ಕೆಟ್ಟ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ನೋವುನುಂಗಿಕೊAಡು ಬದುಕು ಸಾಗಿಸುವಂತಾಗಬೇಕೆAದು ಅವರು ಹೇಳಿದರು.

ತಾ. ೨೯ ರಿಂದ ಇಂದು ಬೆಳಗ್ಗಿನವರೆಗೆ ಸುಮಾರು ೨೫ ಲಕ್ಷಕೂ ಅಧಿಕ ಮಂದಿ ಪುನೀತ್ ಪಾರ್ಥೀವ ಶರೀರದ ದರ್ಶನ ಪಡೆದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಪುನೀತ್ ನಿಧನದ ಆಘಾತದಿಂದ ರಾಜ್ಯಾದ್ಯಂತ ಅವರ ನಾಲ್ಕು ಅಭಿಮಾನಿಗಳು ಮೃತಪಟ್ಟಿದ್ದಾರೆ.