ಮಡಿಕೇರಿ, ಅ. ೩೧: ಮೂಲತಃ ಕೊಡಗು ಜಿಲ್ಲೆಯವರಾದ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರಿಗೆ ಈ ಬಾರಿಯ ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ.
ಮೈಸೂರು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ನೀಡುವ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಪತ್ರಿಕೋದ್ಯಮ ಹಾಗೂ ಸಾಹಿತ್ಯ ವಿಭಾಗದಲ್ಲಿ ರಮೇಶ್ ಉತ್ತಪ್ಪ ಭಾಜನರಾಗಿದ್ದಾರೆ.
ಅರಮನೆ ಆವರಣದಲ್ಲಿ ನ. ೧ ರಂದು ಬೆ.೮.೩೦ಕ್ಕೆ ಗಂಟೆಗೆ ನಡೆಯಲಿರುವ ರಾಜ್ಯೋತ್ಸವ ಸಮಾರಂಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮೈಸೂರು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಮುಖ್ಯ ವರದಿಗಾರರಾಗಿರುವ ಐತಿಚಂಡ ರಮೇಶ್ ಉತ್ತಪ್ಪ ಅವರು ಇಲ್ಲಿಯವರೆಗೆ ೨೯ ಕೃತಿಗಳನ್ನು ರಚಿಸಿದ್ದಾರೆ.