*ಸಿದ್ದಾಪುರ, ಅ. ೩೧: ಸರ್ಕಾರದ ಮೂಲಕ ಅನುಷ್ಠಾನಗೊಂಡ ಕುಡಿಯುವ ನೀರಿನ ಕೇಂದ್ರಗಳು ವೈಫಲ್ಯತೆಯನ್ನು ಕಂಡಿದ್ದರೆ ಖಾಸಗಿಯಾಗಿ ಆರಂಭಿಸಲಾದ ಘಟಕಗಳು ಇಂದಿಗೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ.

ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರ ಆಸಕ್ತಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿ ಒಂದು ವರ್ಷ ಕಳೆದಿದೆ. ಇಲ್ಲಿಯೂ ೫ ರೂ.ಗೆ ೨೦ ಲೀಟರ್ ನೀರನ್ನು ನೀಡಲಾಗುತ್ತಿದ್ದು, ಪ್ರತಿದಿನ ೨ ಸಾವಿರ ಲೀಟರ್ ಶುದ್ಧ ನೀರು ಖರ್ಚಾಗುತ್ತಿದೆ. ಈ ಪರಿಕಲ್ಪನೆ ಬಗ್ಗೆ ಸಹಕಾರಿ ಕ್ಷೇತ್ರ ಮತ್ತು ಸಾರ್ವಜನಿಕ ವಲಯದಲ್ಲಿ ಉತ್ತಮ ಅಭಿಪ್ರಾಯ ಕೇಳಿ ಬಂದಿದೆ. ರಾಜ್ಯದಲ್ಲಿ ಶುದ್ಧ ಕುಡಿಯುವ ನೀರನ್ನು ನೀಡುತ್ತಿರುವ ಎರಡನೇ ಸಹಕಾರ ಸಂಘ ಚೆಟ್ಟಳ್ಳಿ ಸಹಕಾರ ಸಂಘ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.

ಈ ಘಟಕದ ತಾಂತ್ರಿಕ ನಿರ್ವಹಣೆ ಉತ್ತಮವಾಗಿದ್ದು, ಒಂದು ದಿನವೂ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿಲ್ಲ. ಚೆಟ್ಟಳ್ಳಿ ಮಾತ್ರವಲ್ಲದೆ ಅಕ್ಕಪಕ್ಕದ ಊರುಗಳಿಂದಲೂ ಜನ ಬಂದು ನೀರು ಪಡೆದು ಹೋಗುತ್ತಾರೆ. ಖಾಸಗಿ ವ್ಯವಸ್ಥೆಯಾದರೂ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.