ಮುಳ್ಳೂರು, ಅ. ೩೧: ಆಲೂರು-ಸಿದ್ದಾಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ೨೦೨೦-೨೧ನೇ ಸಾಲಿನ ಸಾಮಾನ್ಯ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷೆ ಬಿ.ಸಿ. ಕಾಂತಿ ಅಧ್ಯಕ್ಷತೆಯಲ್ಲಿ ಮಹಿಳಾ ಸಹಕಾರ ಸಂಘದ ಆವರಣದಲ್ಲಿ ನಡೆಯಿತು.
ಮಹಾಸಭೆಯಲ್ಲಿ ಸಂಘದ ಕಾರ್ಯದರ್ಶಿ ಪರ್ಲಕೋಟಿ ಶೈಲ ಸತೀಶ್ ೨೦೨೦-೨೧ನೇ ಸಾಲಿನ ವಾರ್ಷಿಕ ವರದಿ ಮಂಡಿಸುತ್ತಾ ಆಲೂರು-ಸಿದ್ದಾಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವು ೨೦೨೦-೨೧ನೇ ಸಾಲಿನಲ್ಲಿ ಉತ್ತಮ ವಹಿವಾಟು ನಡೆಸಿ ಈ ಮೂಲಕ ರೂ. ೪ ಲಕ್ಷದ ೯೬ ಸಾವಿರ ನಿವ್ವಳ ಲಾಭಗಳಿಸಿರುವುದಾಗಿ ವರದಿಯಲ್ಲಿ ತಿಳಿಸಿದರು.
ಸಂಘದ ಅಧ್ಯಕ್ಷೆ ಬಿ.ಸಿ. ಕಾಂತಿ ಮಹಾಸಭೆಯಲ್ಲಿ ಮಾತನಾಡಿ, ನಮ್ಮ ಸಂಘವು ೨೦೨೦-೨೧ನೇ ಸಾಲಿನಲ್ಲಿ ಗಳಿಸಿರುವ ರೂ. ೪.೯೬ ಲಕ್ಷ ಲಾಭಾಂಶವನ್ನು ವಿಲೇವಾರಿ ಮಾಡಿ ಶೇ. ೬೫ ರಂತೆ ನಮ್ಮ ಸಂಘದ ವ್ಯಾಪ್ತಿಯ ಹಾಲು ವಿತರಕರಿಗೆ ಬೋನಸ್ ರೂಪದಲ್ಲಿ ವಿಂಗಡನೆ ಮಾಡಲು ತೀರ್ಮಾನಿಸಲಾಗಿದೆ ಎಂದರು. ನಮ್ಮ ಸಂಘವು ಕಳೆದ ಸಾಲಿಗಿಂತ ಹೆಚ್ಚಿನ ಲಾಭಗಳಿಸಿದ್ದು ಇದಕ್ಕೆ ಹಾಲು ಉತ್ಪಾದಕರ ಸಹಕಾರ ಕಾರಣವಾಗಿದೆ ಎಂದರು.
ಮಹಾಸಭೆಯಲ್ಲಿ ಹಾಸನ ಹಾಲು ಒಕ್ಕೂಟದ ಕೂಡಿಗೆ ಡೇರಿಯ ವಿಸ್ತರಣಾಧಿಕಾರಿ ವೀಣಾ ಮಾತನಾಡಿ, ಹಾಲು ಉತ್ಪಾದಕರು ತಮ್ಮ ವ್ಯಾಪ್ತಿಯಲ್ಲಿರುವ ಹಾಲು ಉತ್ಪಾದನೆ ಸಹಕಾರ ಕೇಂದ್ರಗಳಿಗೆ ಗುಣಮಟ್ಟದ ಹಾಲು ವಿತರಣೆ ಮಾಡುವುದರಿಂದ ಸಂಘವು ಅಭಿವೃದ್ಧಿಯಾಗುವುದರ ಜೊತೆಯಲ್ಲಿ ಹಾಲು ವಿತರಕರು ಸಹ ಆರ್ಥಿಕವಾಗಿ ಸಬಲರಾಗಬಹುದೆಂದರು. ಆಲೂರು-ಸಿದ್ದಾಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಸಂಘವು ಜಾಗವನ್ನು ಗುರುತಿಸಿದ್ದು ಹಾಲು ಒಕ್ಕೂಟದಿಂದ ರೂ. ೮ ಲಕ್ಷ ಸಹಾಯ ಧನ ನೀಡಲಾಗುತ್ತದೆ ಎಂದು ಅವರು ಭರವಸೆ ನೀಡಿದರು.
ಮಹಾಸಭೆಯಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ವಿತರಕರಿಗೆ ಮತ್ತು ಹತ್ತನೆ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಹಾಲು ವಿತರಕರ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಬಿ.ಸಿ. ಸರೋಜ, ನಿರ್ದೇಶಕರಾದ ಎಸ್.ಎಲ್. ಶಂಕರಮ್ಮ, ಕಮಲಮ್ಮ, ಹೆಚ್.ವಿ. ದೇವಕಿ, ಕೆ. ಜಯಮ್ಮ, ಓ.ಸಿ. ಭಾಗೀರಥಿ, ಸಿ.ಎ. ಉಷಾರಾಣಿ, ಕೆ.ಎನ್. ಹರಿಣಾಕ್ಷಿ, ಪುಟ್ಟಲಕ್ಷಿö್ಮ, ಕೆ.ಜಿ. ಜಯಮ್ಮ ಹಾಗೂ ಹಾಲು ಉತ್ಪಾದಕರು ಹಾಜರಿದ್ದರು.
- ಭಾಸ್ಕರ್ ಮುಳ್ಳೂರು