ಮಡಿಕೇರಿ, ಅ. ೩೦ : ವೀರಾಜಪೇಟೆ ತಾಲೂಕಿನ ಬೂದಿಮಾಳದಲ್ಲಿನ ಕಲ್ಲುಗಣಿಗಾರಿಕೆ ಯನ್ನು ತೆರವು ಮಾಡುವಂತೆ ಗ್ರಾಮಸ್ಥರ ಪರವಾಗಿ ಟಿ.ಕೆ ಹರೀಶ್, ಸಚಿನ್ ಮೇದಪ್ಪ, ಜುಬೇರ್, ರಫೀಕ್ ಸಿ.ಹೆಚ್, ಬಿ.ಎಸ್ ದಿನೇಶ್ ಹಾಗೂ ಎಮ್.ಟಿ ಹರಿದಾಸ್ ಅವರುಗಳು ಬೇಟೋಳಿ ಪಿ.ಡಿ.ಓ, ಜಿಲ್ಲಾಧಿಕಾರಿ, ವೀರಾಜಪೇಟೆ ತಾಲೂಕು ತಹಶೀಲ್ದಾರರಿಗೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ನಗರದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾಹಿತಿ ನೀಡಿದ ಇವರುಗಳು, ಕ್ರಷರ್‌ನಿಂದ ಉತ್ಪತ್ತಿಯಾಗುವ ಕಲ್ಲಿನ ಪುಡಿಯಿಂದಾಗಿ ಹಲವಾರು ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕ್ರಷರ್‌ನಿಂದ ಹೊರಬರುವ ವಿಷಪೂರಿತ ನೀರನ್ನು ತೋಡಿಗೆ ಹರಿಯಬಿಟ್ಟ ಕಾರಣ ಕಲುಷಿತ ನೀರನ್ನೇ ಗ್ರಾಮಸ್ಥರು ಉಪಯೋಗಿಸು ತ್ತಿರುವುದಾಗಿ ಹೇಳಿದರು. ರಾಜಕೀಯ ಬಲವಿರುವ ಕ್ರಷರ್ ಸಂಸ್ಥೆ ಪರಿಸರ ಮಾಲಿನ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ಗ್ರಾಮಸ್ಥರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಆದುದರಿಂದ ಹೆಗ್ಗಳ ಗ್ರಾಮದ ಬೂದಿಮಾಳ ಹಾಗೂ ನಿರ್ಮಲಗಿರಿ ಪ್ರದೇಶಗಳಿಂದ ಕಲ್ಲು ಗಣಿಗಾರಿಕೆಯನ್ನು ತೆರವುಗೊಳಿಸ ಬೇಕೆಂದು ಆಗ್ರಹಿಸಿದರು.

ವೈದ್ಯಕೀಯ ವರದಿ ನೀಡುವಂತೆ ಸೂಚನೆ

ಕಲ್ಲುಗಣಿಗಾರಿಕೆ ಸ್ಥಳಕ್ಕೆ ಭೇಟಿ ನೀಡಿದ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ ಅವರು ಪರಿಶೀಲನೆ ನಡೆಸಿದ್ದಾರೆ. ‘ಶಕ್ತಿ’ ಯೊಂದಿಗೆ ಮಾತನಾಡಿದ ಅವರು ಗಣಿಗಾರಿಕೆಯಿಂದಾಗಿ ಗ್ರಾಮಸ್ಥರ ಆರೋಗ್ಯಕ್ಕೆ ತೊಂದರೆಯಾಗುತ್ತಿದ್ದರೆ ಈ ಸಂಬAಧ ಕ್ರಮ ಕೈಗೊಳ್ಳಲಾಗುವುದು. ಸ್ಥಳಕ್ಕೆ ತೆರಳಿ ಅನಾರೋಗ್ಯದಿಂದ ಬಳಲುತ್ತಿರುವವರ ವೈದ್ಯಕೀಯ ತಪಾಸಣೆ ನಡೆಸಿ ವರದಿ ನೀಡುವಂತೆ ಜಿಲ್ಲಾ ವೈದ್ಯಾಧಿಕಾರಿ ಅವರಿಗೆ ಸೂಚಿಸಲಾಗಿದೆ ಎಂದರು.