ಕೂಡಿಗೆ, ಅ. ೩೦: ಶಿರಂಗಾಲ ಗ್ರಾಮ ದೇವತೆಯಾದ ಮಂಟಿಗಮ್ಮ ದೇವಾಲಯದ ನೂತನ ಕಟ್ಟಡದ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸುವುದರ ಜೊತೆಗೆ ಇಲಾಖೆ ಮತ್ತು ಶಾಸಕರ ನಿಧಿಯ ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದರು.
ಶಿರಂಗಾಲ ದೇವಾಲಯ ಸಮಿತಿಯ ವತಿಯಿಂದ ಈಗಾಗಲೇ ರೂ. ೨.೫೦ ಕೋಟಿ ವೆಚ್ಚದಲ್ಲಿ ನೂತನವಾಗಿ ಸುಸಜ್ಜಿತ ದೇವಾಲಯದ ಕಟ್ಟಡವನ್ನು ಕಟ್ಟಲು ಗ್ರಾಮಸ್ಥರು ಮತ್ತು ಸಮಿತಿಯವರು ಸಿದ್ಧರಾಗಿ ಅದರ ನೀಲಿ ನಕ್ಷೆಯ ಅನುಗುಣವಾಗಿ ಕಾಮಗಾರಿ ಪ್ರಾರಂಭ ಮಾಡಿದರು. ಈ ಕಾಮಗಾರಿಯನ್ನು ಶಿರಂಗಾಲ ರಸ್ತೆಯ ಕಾಮಗಾರಿ ಭೂಮಿಪೂಜೆಗೆ ತೆರಳಿದ ಸಂದರ್ಭದಲ್ಲಿ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷ ಸೇರಿದಂತೆ ಸದಸ್ಯರು ಹಾಗೂ ಗ್ರಾಮದ ಪ್ರಮುಖರು ಹಾಜರಿದ್ದರು.