ಕೂಡಿಗೆ, ಅ. ೩೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಮತ್ತು ಬಸವನಹಳ್ಳಿ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿ ನಿರ್ಮಾಣಗೊಂಡಿರುವ ಮನೆಗಳಲ್ಲಿ ವಾಸಿಸುತ್ತಿರುವ ೫೨೮ ಕುಟುಂಬದವರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಬ್ಯಾಡಗೊಟ್ಟ ಸಮುದಾಯ ಭವನದ ಸಭಾಂಗಣದಲ್ಲಿ ಹಕ್ಕುಪತ್ರ ವಿತರಣೆ ಮಾಡಿದರು.

ನಂತರ ಮಾತನಾಡಿದ ಅವರು ದಿಡ್ಡಳ್ಳಿಯಿಂದ ಹೊರ ಹಾಕಿದ ಹಾಡಿಯ ಜನರಿಗೆ ಕೂಡಿಗೆ ಮತ್ತು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯವರು ಸ್ಥಳ ನೀಡಿ ಮಾನವೀಯತೆಯನ್ನು ಮರೆದಿದ್ದಾರೆ. ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತದವರಿಂದ ಮನೆಗಳ ನಿರ್ಮಾಣ ಕಾರ್ಯ ನಡೆದು ಅರ್ಹ ಫಲಾನುಭವಿಗಳಿಗೆ ನೀಡಲಾಗಿದೆ. ಆದರೆ ಕೆಲವು ಮನೆಗಳಲ್ಲಿ ಜನರು ವಾಸಿಸುತ್ತಿಲ್ಲ ಎಂಬ ದೂರು ಬಂದಿದೆ. ಅಂತಹವರಿಗೆ ಹಕ್ಕುಪತ್ರವನ್ನು ನೀಡಲಾಗುವುದಿಲ್ಲ. ಅಲ್ಲದೆ ಹಕ್ಕು ಪತ್ರ ಪಡೆದು ಬೇರೆಯವರಿಗೆ ಮಾರಾಟ ಮಾಡಿದರೆ ಅವರಿಗೆ ಮನೆಯ ಹಕ್ಕು ಇರುವುದಿಲ್ಲ ಅಲ್ಲದೆ ಅವರಿಗೆ ಮನೆಯನ್ನು ನೀಡಲಾಗುವುದಿಲ್ಲ ಎಂದರು.

ನAತರ ಶಾಸಕ ಅಪ್ಪಚ್ಚು ರಂಜನ್‌ನವರು ದಿಡ್ಡಳ್ಳಿ ಪುನರ್ವಸತಿ ಕೇಂದ್ರ ರಸ್ತೆ ಮತ್ತು ಚರಂಡಿ ಕಾಮಗಾರಿ ನಡೆದ ಸ್ಥಳಗಳ ಪರಿಶೀಲಿಸಿ ನಂತರ ಬಾಕಿ ಇರುವ ಕಾಮಗಾರಿಗಳನ್ನು ೧೫ ದಿನಗಳಲ್ಲಿ ಮುಗಿಸುವಂತೆ ಸೂಚನೆ ನೀಡಿದರು.

ಹಕ್ಕು ಪತ್ರ ನೀಡುವ ವ್ಯವಸ್ಥೆಯನ್ನು ಗಿರಿಜನ ಸಮನ್ವಯ ಇಲಾಖೆಯ ವತಿಯಿಂದ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ ಪ್ರಕಾಶ್ ವಹಿಸಿದ್ದರು. ಸಭೆಯಲ್ಲಿ ಉಪಾಧ್ಯಕ್ಷೆ ಮೋಹಿನಿ ತಮ್ಮಣೆಗೌಡ ಸದಸ್ಯರಾದ ಟಿ.ಪಿ. ಹಮೀದ್, ಜಯಶ್ರೀ, ತಾಲೂಕು ಗಿರಿಜನ ಸಮನ್ವಯ ಅಧಿಕಾರಿ ಬಾಲಕೃಷ್ಣ ರೈ, ಅಭಿವೃದ್ಧಿ ಅಧಿಕಾರಿ ಅಯಿಷಾ ಸೇರಿದಂತೆ ಪುನರ್ವಸತಿ ಕೇಂದ್ರದ ನೂರಾರು ಕುಟುಂಬದ ಸದಸ್ಯರು ಭಾಗವಹಿಸಿದ್ದರು.