ಕೊಡ್ಲಿಪೇಟೆ,ಅ.೩೦: ಕನ್ನಡ ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ನಿಧನಕ್ಕೆ ಕೊಡ್ಲಿಪೇಟೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸಂತಾಪ ಸಭೆ ನಡೆಸಲಾಯಿತು. ಕೊಡ್ಲಿಪೇಟೆ ಬಸ್ ನಿಲ್ದಾಣದಲ್ಲಿ ಪುನೀತ್ ಅವರ ಭಾವಚಿತ್ರ ಅಳವಡಿಸಿ ಪುಷ್ಪಾರ್ಚನೆ, ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೊಡ್ಲಿಪೇಟೆ ಗ್ರಾ.ಪಂ.ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ವರ್ತಕರು, ಚಾಲಕರು, ಸಾರ್ವಜನಿಕರು ಈ ಸಂದರ್ಭ ಉಪಸ್ಥಿತರಿದ್ದರು.

ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ್, ಪ್ರಮುಖರಾದ ಭಗವಾನ್ ಗೌಡ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಭೂಪಾಲ್, ಕಾರ್ಯದರ್ಶಿ ವೇದಕುಮಾರ್, ದಲಿತ ಸಂಘಟನೆ ಒಕ್ಕೂಟದ ಅಧ್ಯಕ್ಷ ಜನಾರ್ಧನ್, ಬ್ಯಾಡಗೊಟ್ಟ ಗ್ರಾ.ಪಂ. ಸದಸ್ಯ ಹನೀಫ್ ಅವರುಗಳು ಮಾತನಾಡಿ, ಪುನೀತ್ ರಾಜ್‌ಕುಮಾರ್ ಅವರ ಸಾಧನೆ, ಸಾಮಾಜಿಕ ಕಾರ್ಯಗಳನ್ನು ಸ್ಮರಿಸಿದರು. ಕೊಡ್ಲಿಪೇಟೆ ಪಟ್ಟಣದ ವರ್ತಕರು ಒಂದು ಗಂಟೆಗಳ ಕಾಲ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಅಗಲಿದ ನಟನಿಗೆ ಗೌರವ ಸಲ್ಲಿಸಿದರು. ನಂತರ ಗ್ರಾ.ಪಂ. ಆವರಣದಲ್ಲಿ ಜನಪ್ರತಿನಿಧಿಗಳು, ಸಿಬ್ಬಂದಿಗಳು ಶ್ರದ್ಧಾಂಜಲಿ ಸಭೆ ನಡೆಸಿದರು.

ಸೋಮವಾರಪೇಟೆ: ಕೊಡಗು ಜಿಲ್ಲಾ ಜನತಾ ಪಕ್ಷದ ವತಿಯಿಂದ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಪಕ್ಷದ ಜಿಲ್ಲಾಧ್ಯಕ್ಷ ದಿವಾಕರ್, ಕಾರ್ಯಕರ್ತರಾದ ಮಂಜುನಾಥ್, ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.