ಕುಶಾಲನಗರ, ಅ. ೩೧: ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಿಗೆಯನ್ನು ಪಡೆಯಲು, ಪರವಾನಿಗೆ ನವೀಕರಿಸಲು ನವೆಂಬರ್ ೧೫ ರ ತನಕ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್ ತಿಳಿಸಿದ್ದಾರೆ.
ಪಟ್ಟಣದ ರಥಬೀದಿಯಲ್ಲಿ ನೂತನ ಕಚೇರಿಗೆ ಚಾಲನೆ ನೀಡಿ ಮಾಹಿತಿ ನೀಡಿದ ಅವರು ಕುಶಾಲನಗರ ಪಟ್ಟಣದ ರಥಬೀದಿಯಲ್ಲಿ ಪಂಚಾಯಿತಿ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಒಳಗೊಂಡ ತಾತ್ಕಾಲಿಕ ಕಚೇರಿಯನ್ನು ಪ್ರಾರಂಭಿಸಲಾಗಿದ್ದು, ಉದ್ದಿಮೆ ಪರವಾನಿಗೆ ಪಡೆಯಲು ಅಥವಾ ನವೀಕರಿಸಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಹೊಸ ಉದ್ದಿಮೆ ಪರವಾನಿಗೆ ಪಡೆಯಲು ನಿಗದಿತ ನಮೂನೆಯಲ್ಲಿ ಅರ್ಜಿ ಉದ್ದಿಮೆಯ ಮಾಲೀಕರ ಗುರುತಿನ ದಾಖಲೆ, ಉದ್ದಿಮೆ ಸ್ಥಳದ ಗುತ್ತಿಗೆ ಕರಾರು ಪತ್ರ ಹಾಗೂ ಭಾವಚಿತ್ರ ಸಹಿತ ಕಚೇರಿಗೆ ಬಂದು ದಾಖಲೆ ಪಡೆಯುವುದು. ನವೀಕರಣ ಮಾಡಬೇಕಾದಲ್ಲಿ ಹಿಂದಿನ ಸಾಲಿನ ಉದ್ದಿಮೆ ಪರವಾನಿಗೆ ಪ್ರತಿಯನ್ನು ನೀಡಿ ದಾಖಲೆಗಳನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ. ಈ ಸಂದರ್ಭ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ. ಸುರೇಶ್, ಸದಸ್ಯರಾದ ಅಮೃತ್ ರಾಜ್, ಎಂ.ವಿ. ನಾರಾಯಣ, ಆರೋಗ್ಯಾಧಿಕಾರಿ ಉದಯ್ ಕುಮಾರ್ ಮತ್ತಿತರರಿದ್ದರು.