ಶನಿವಾರಸಂತೆ, ಅ. ೩೦: ಶನಿವಾರಸಂತೆ ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ೨೦೨೧-೨೨ನೇ ಸಾಲಿನ ಗ್ರಾಮಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮ ಕಿರಣ್ ಅಧ್ಯಕ್ಷತೆಯಲ್ಲಿ ಹೆಮ್ಮನೆ ಗ್ರಾಮದ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾಡಿರುವ ಕಾಜೂರು ಗ್ರಾಮದ ಕೆರೆ ಮತ್ತು ಸುಳುಗಳಲೆ ಗ್ರಾಮದಲ್ಲಿ ಹೂಳೆತ್ತುವ ಕೆಲಸದಲ್ಲಿ ಅವ್ಯವಹಾರ ನಡೆದಿದೆ ಎಂದು ಗ್ರಾಮಸ್ಥರಾದ ಮುತ್ತೇಗೌಡ, ಶಿರಾವ್ ಧರ್ಮಪ್ಪ, ಸುಳುಗಳಲೆ ಶಿವಲಿಂಗ, ಕೆ.ಟಿ. ಹರೀಶ್, ಕಾಜೂರು ಗಣೇಶ್ ಉತ್ತಪ್ಪ ಇತರರು ದೂರಿದರು. ಕಾಮಗಾರಿಯ ಬಗ್ಗೆ ಸೂಕ್ತ ತನಿಖೆ ಮಾಡಬೇಕೆಂದು ಆಗ್ರಹಿಸಿದರು.

ಸಭೆಯಲ್ಲಿ ಕಂದಾಯ ಇಲಾಖೆ ಸೇರಿದಂತೆ ಪ್ರಮುಖ ಅಧಿಕಾರಿಗಳ ಗೈರಿನ ಬಗ್ಗೆ ವಾರ್ಡ್ ಸಭೆಗಳನ್ನು ನಡೆಸಿದರೂ, ಗ್ರಾಮಸ್ಥರಿಗೆ ಸರಿಯಾದ ಮಾಹಿತಿಯನ್ನು ನೀಡದ ಕುರಿತು ಸ್ಥಳೀಯರು ಅಧಿಕಾರಿಗಳು ಹಾಗೂ ಹಾಲಿ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು. ದುಂಡಳ್ಳಿ ಗ್ರಾಮದ ಬಡ ಮಹಿಳೆಯೊಬ್ಬರ ವಾಸದ ಮನೆ ಬಿದ್ದು ಹೋಗಿ ೩ ತಿಂಗಳು ಕಳೆದರೂ, ಕಂದಾಯ ಇಲಾಖೆಯಿಂದ ಯಾವುದೇ ಪರಿಹಾರ ನೀಡಿಲ್ಲ ಎಂದು ಸಭೆಗೆ ಬಂದು ಕಣ್ಣೀರಿಟ್ಟ ಮಹಿಳೆಯ ಪರವಾಗಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಜಿ.ಪಂ. ಇಂಜಿನಿಯರ್ ಸಲೀಂ ವಿವಿಧ ಯೋಜನೆಗಳ ಕ್ರಿಯಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಮೀನುಗಾರಿಕೆ ಇಲಾಖೆ ಅಧಿಕಾರಿ ಸಚಿನ್ ನೋಡಲ್ ಅಧಿಕಾರಿಯಾಗಿ ಪಾಲ್ಗೊಂಡಿದ್ದರು.

ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ನಿತಿನ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ, ಸದಸ್ಯರುಗಳಾದ ಡಿ.ಪಿ. ಬೋಜಪ್ಪ, ಸಿ.ಜೆ. ಗಿರೀಶ್, ಎಂ.ಡಿ. ದೇವರಾಜ್, ಬಿ.ಎಸ್. ಮಹಂತೇಶ್, ಎಸ್.ಸಿ. ಕಾಂತರಾಜ್, ಎಸ್.ಪಿ. ಭಾಗ್ಯ, ಕೆ.ಎಸ್. ಜಾನಕಿ, ನಂದಿನಿ, ಗೋಪಿಕಾ, ಸತ್ಯವತಿ, ಭವಾನಿ, ಪಿ.ಡಿ.ಓ. ವೇಣುಗೋಪಾಲ್, ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.