ಸೋಮವಾರಪೇಟೆ, ಅ. ೩೧: ಕಾಫಿ ಮಂಡಳಿ-ಸೋಮವಾರಪೇಟೆ ಮತ್ತು ಕೊಡಗು ಬೆಳೆಗಾರರ ಸಂಘದ ಸಹಯೋಗದಲ್ಲಿ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರದಲ್ಲಿ ಕಾಫಿ ನರ್ಸರಿ ನಿರ್ವಹಣೆ, ಪೋಷಕಾಂಶ ನಿರ್ವಹಣೆ ಹಾಗೂ ಕಾಫಿ ಬಿತ್ತನೆ ಬೀಜ ತಯಾರಿಕೆ ಕುರಿತು ವಿಚಾರ ಸಂಕಿರಣ ನಡೆಯಿತು.
ಕಾರ್ಯಕ್ರಮದಲ್ಲಿ ನರ್ಸರಿ ನಿರ್ವಹಣೆ ಬಗ್ಗೆ ಬೇಸಾಯ ಶಾಸ್ತç ವಿಜ್ಞಾನಿ ಡಾ. ಮುಕಾರಿಬ್ ಮಾತನಾಡಿ, ನರ್ಸರಿ ಮಾಡುವಾಗ ಬಿತ್ತನೆ ಬೀಜಗಳ ಆಯ್ಕೆಗಳ ಬಗ್ಗೆ ಒತ್ತು ಕೊಡಬೇಕು ಎಂದರು. ಮಣ್ಣು ವಿಜ್ಞಾನಿ ಡಾ. ರಾಜೀವ್ ಅವರು ಮಣ್ಣಿನಲ್ಲಿ ಪೋಷಕಾಂಶಗಳ ನಿರ್ವಹಣೆ, ಕೃಷಿ ಸುಣ್ಣದ ಮಹತ್ವ ಹಾಗೂ ಮಣ್ಣು ಪರೀಕ್ಷೆಯ ಅಗತ್ಯತೆ ಬಗ್ಗೆ ವಿವರಿಸಿದರು.
ತಳಿ ಹಾಗೂ ಸಸ್ಯ ಸಂವರ್ಧನ ವಿಜ್ಞಾನಿ ಡಾ. ಶಿವಲಿಂಗು ಅವರು ಪ್ರಾತ್ಯಕ್ಷಿಕೆ ಮೂಲಕ ಕಾಫಿ ಗಿಡ ಕಸಿ ಮತ್ತು ತದ್ರೂಪಿ ಸಸ್ಯ ಉತ್ಪಾದನೆ ಬಗ್ಗೆ ವಿವರಿಸಿದರು. ಕೀಟ ವಿಜ್ಞಾನಿ ಮಂಜುನಾಥ ರೆಡ್ಡಿ, ಜೈವಿಕ ಕೀಟ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಕೊಡಗು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ದಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಾಫಿ ಬೆಳೆಗಾರರ ಬೋಸ್ ಮಂದಣ್ಣ, ಸಂಶೋಧನೆಯ ಉಪನಿರ್ದೇಶಕ ಡಾ. ಜಾರ್ಜ್ ಡೇನಿಯಲ್, ವಿಸ್ತರಣಾ ಉಪನಿರ್ದೇಶಕ ಶಿವಕುಮಾರ ಸ್ವಾಮಿ, ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಗೋಪಾಲನಾಯ್ಕ, ಕಿರಿಯ ಸಂಪರ್ಕ ಅಧಿಕಾರಿ ವಿಶ್ವನಾಥ್ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ನರ್ಸರಿ ನಿರ್ವಹಣೆ ಮಾಡುವವರು ಹಾಗೂ ಕಾಫಿ ಬೆಳೆಗಾರರು ಭಾಗವಹಿಸಿ ಪ್ರಯೋಜನ ಪಡೆದರು. ಪೊನ್ನಿಮನಿ ಟ್ರ್ಯಾಕ್ಟರ್ ಮತ್ತು ಉಪಕರಣಗಳು ಹಾಗೂ ಕೀಟಶಾಸ್ತç ವಿಭಾಗದಿಂದ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.