ಕೂಡಿಗೆ, ಅ. ೩೦: ಕಾವೇರಿ ನೀರಾವರಿ ನಿಗಮದ ಮೂಲಕ ಕೂಡಿಗೆಯ ಸೈನಿಕ ಶಾಲೆ ಸಮೀಪದಲ್ಲಿ ಹರಿಯುವ ಹಾರಂಗಿ ನದಿಯ ಒಂದು ಭಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಐದು ಕೋಟಿ ವೆಚ್ಚದ ಹೆಚ್ಚುವರಿಯಾಗಿ ಕ್ರಿಯಾ ಯೋಜನೆಯನ್ನು ತಯಾರಿಸುವಂತೆ ನಿಗಮದ ಇಂಜಿನಿಯರ್ಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸೂಚನೆ ನೀಡಿದರು. ಅವರು ದಿಡ್ಡಳ್ಳಿ ಪುನರ್ವಸತಿ ಕೇಂದ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಈಗಾಗಲೇ ಕಾವೇರಿ ನೀರಾವರಿ ನಿಗಮದ ವತಿಯಿಂದ ಐದು ಕೋಟಿ ಹಣದಲ್ಲಿ ತಡೆಗೋಡೆ ಕಾಮಗಾರಿಗಳನ್ನು ಕೈಗೊಳ್ಳಲು ಎಲ್ಲಾ ಸಿದ್ಧತೆಗಳು ನಡೆದಿವೆ ಅದರಂತೆ ಹೆಚ್ಚುವರಿಯಾಗಿ ಈ ಸಾಲಿನಲ್ಲಿ ಐದು ಕೋಟಿ ಹಣವನ್ನು ಸೈನಿಕ ಶಾಲೆಯ ತಡೆಗೋಡೆಗೆ ನೀಡಲಾಗುತ್ತಿದೆ.
ಈಗಾಗಲೇ ಮುನ್ನೂರು ಮೀಟರ್ ಕಾಂಕ್ರೀಟ್ ತಡೆಗೋಡೆಯ ಮುಂದುವರಿದ ಭಾಗವಾಗಿ ಹಾರಂಗಿ ಅಣೆಕಟ್ಟೆಯಿಂದ ಹೆಚ್ಚುವರಿಯಾಗಿ ನದಿಯ ಮೂಲಕ ಬರುವ ನೀರು ಸೈನಿಕ ಶಾಲೆಗೆ ನುಗ್ಗದಂತೆ ತಡೆಗೋಡೆ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದರು. ಈ ಸಂದರ್ಭ ಹಾರಂಗಿ ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.