ಸೋಮವಾರಪೇಟೆ, ಅ. ೩೦: ಪ್ರಾಥಮಿಕ ಶಾಲಾ ಶಿಕ್ಷಕರನ್ನು ಕೋವಿಡ್-೧೯ ಕರ್ತವ್ಯದಿಂದ ಮುಕ್ತಗೊಳಿಸಬೇಕೆಂದು ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕೋವಿಡ್ ವಾಚ್ ಆ್ಯಪ್, ಕಾಂಟ್ಯಾಕ್ಟ್ ಟ್ರೇಸಿಂಗ್ ಮತ್ತು ಗಡಿ ಭಾಗದ ಚೆಕ್‌ಪೋಸ್ಟ್ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕೆಂದು ಸಂಘದ ತಾಲೂಕು ಅಧ್ಯಕ್ಷ ಟಿ.ಕೆ. ಬಸವರಾಜ್ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಕಳೆದ ಎರಡು ವರ್ಷಗಳ ಕಾಲ ಶಿಕ್ಷಕರು ಕೋವಿಡ್ ಸಂದಿಗ್ದ ಪರಿಸ್ಥಿತಿಯಲ್ಲಿ ಜೀವದ ಹಂಗು ತೊರೆದು ಕೆಲಸ ನಿರ್ವಹಿಸಿದ್ದಾರೆ. ಈಗ ೧ ರಿಂದ ೭ನೇ ತರಗತಿಯವರೆಗೆ ಪೂರ್ಣಕಾಲಿಕ ತರಗತಿಗಳು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ, ಪ್ರಸಕ್ತ ವರ್ಷ ತಾಲೂಕಿನ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ತಾಲೂಕಿನಲ್ಲಿ ಶಿಕ್ಷಕರ ಕೊರತೆಯಿದೆ. ಈಗ ಶಿಕ್ಷಕರನ್ನು ಕೋವಿಡ್ ಕೆಲಸಕ್ಕೆ ನಿಯೋಜಿಸಿದರೆ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಈ ಸಂದರ್ಭ ಸಂಘದ ಉಪಾಧ್ಯಕ್ಷರಾದ ಪ್ರೇಮ, ಖಜಾಂಚಿ ಎಸ್.ಎಂ. ರವಿ, ಸಹಕಾರ್ಯದರ್ಶಿ ಎಸ್.ಎಂ. ಆಶಾ ಉಪಸ್ಥಿತರಿದ್ದರು.