ಗೋಣಿಕೊಪ್ಪಲು, ಅ.೨೯: ಪಂಚಾಯಿತಿಗೆ ನಿಗಧಿತ ಸಮಯದಲ್ಲಿ ತೆರಿಗೆಯನ್ನು ಪಾವತಿಸದೆ ಹಲವು ವರ್ತಕರು ಸತಾಯಿಸುತ್ತಿದ್ದರು. ಅನೇಕ ಬಾರಿ ಪಂಚಾಯಿತಿಯಿAದ ನೋಟೀಸು ಜಾರಿಗೊಳಿಸಿದ್ದರೂ ಪ್ರಯೋಜನವಾಗುತ್ತಿರಲಿಲ್ಲ. ತೆರಿಗೆ ಹಣ ಸಕಾಲದಲ್ಲಿ ಪಂಚಾಯಿತಿಗೆ ಪಾವತಿ ಆಗದ ಕಾರಣ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿತ್ತು. ಇದರಿಂದ ಎಚ್ಚೆತ್ತ ಗ್ರಾ.ಪಂ. ಕಠಿಣ ನಿರ್ಧಾರ ಕೈಗೊಂಡು ತೆರಿಗೆ ವಂಚಿಸುತ್ತಿದ್ದ ಅಂಗಡಿ ಮಳಿಗೆಗಳಿಗೆ ಬೀಗ ಜಡಿಯಲು ಕ್ರಮಕೈಗೊಂಡಿದೆ.

ನಿಗದಿತ ಸಮಯದಲ್ಲಿ ತೆರಿಗೆಕಟ್ಟದೆ ವ್ಯಾಪಾರ, ವಹಿವಾಟು ನಡೆಸುತ್ತಿದ್ದವರ ಮೇಲೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ನಿರ್ಧಾಕ್ಷಿಣ್ಯ ಕ್ರಮಕ್ಕೆ ಮುಂದಾಗಿದೆ. ಹಲವು ವರ್ಷಗಳಿಂದ ಪಂಚಾಯಿತಿ ತೆರಿಗೆಯನ್ನು ವಂಚಿಸಿ ಕೇವಲ ಸಬೂಬುಗಳನ್ನೆ ಹೇಳುತ್ತ ಸಮಯ ಕಳೆಯುತ್ತಿದ್ದರು. ಹಲವು ಬಾರಿ ನೋಟೀಸು ನೀಡಿದ್ದರೂ ಇವುಗಳಿಗೆ ಸೊಪ್ಪು ಹಾಕದೆ ಸುಮ್ಮನಿದ್ದರು. ಇದರಿಂದ ಎಚ್ಚೆತ್ತ ನೂತನ ಗ್ರಾ.ಪಂ. ಆಡಳಿತ ಮಂಡಳಿ ಅಂತಹ ಅಂಗಡಿ ಮಾಲೀಕರಿಗೆ ಬಿಸಿ ಮುಟ್ಟಿಸಿದೆ. ಪಂಚಾಯಿತಿಯ ಅಧ್ಯಕ್ಷೆ ಚೈತ್ರ, ಪಿಡಿಓ ತಿಮ್ಮಯ್ಯ ಸಮ್ಮುಖದಲ್ಲಿ ಆಡಳಿತ ಮಂಡಳಿ ಸದಸ್ಯರು ಹಾಗೂ ಪಂಚಾಯಿತಿ ಸಿಬ್ಬಂದಿಗಳು ಅಂಗಡಿಗೆ ತೆರಳಿ ನೋಟೀಸು ಅಂಟಿಸಿ ಬೀಗ ಜಡಿದಿದ್ದಾರೆ.

ನಗರದ ಮುಖ್ಯರಸ್ತೆಯ ಬಳಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಶಮೀರ್ ಎಂಬುವರು ಪಂಚಾಯಿತಿಯಿAದ ಅನುಮತಿ ಪಡೆದು ಕುರಿಮಾಂಸ ಹಾಗೂ ಕೋಳಿ ಮಾಂಸದ ಮಳಿಗೆಯನ್ನು ತೆರೆದು ವ್ಯಾಪಾರ ಮಾಡುತ್ತಿದ್ದರು. ಆದರೆ ನಿಗಧಿತ ಸಮಯದಲ್ಲಿ ಪಂಚಾಯಿತಿಗೆ ಪಾವತಿಸಬೇಕಾದ ಲೈಸನ್ಸ್ ಫೀಜ್ ಕಟ್ಟುತ್ತಿರಲಿಲ್ಲ. ಈ ಬಗ್ಗೆ ಪಂಚಾಯಿತಿ ಅನೇಕ ಬಾರಿ ಮಾಲೀಕರಿಗೆ ನೋಟೀಸು ನೀಡಿ ಲೈಸನ್ಸ್ ಹಣಕಟ್ಟುವಂತೆ ಸೂಚನೆ ನೀಡಿತ್ತು. ಆದರೂ ಇದಕ್ಕೆ ಮಾಲೀಕರು ಯಾವುದೇ ಸ್ಪಂದನೆ ನೀಡುತ್ತಿರಲಿಲ್ಲ. ಪಂಚಾಯಿತಿ ಆಡಳಿತ ಮಂಡಳಿ ಸಭೆಯ ನಿರ್ಧಾರದಂತೆ ಅಂಗಡಿ ಮಳಿಗೆಗೆ ಬೀಗ ಜಡಿಯಲು ನಿರ್ಧಾರ ಕೈಗೊಳ್ಳಲಾಗಿತ್ತು.

ಮೂಲಗಳ ಪ್ರಕಾರ ಈಗಾಗಲೇ ಪಂಚಾಯಿತಿಗೆ ಹಲವು ವರ್ಷಗಳ ಮೂರು ಲಕ್ಷಕ್ಕೂ ಅಧಿಕ ತೆರಿಗೆ ಹಣವನ್ನು ಪಾವತಿಸದೆ ಅಂಗಡಿ ಮಾಲೀಕರು ವ್ಯಾಪಾರ ನಡೆಸುತ್ತಿದ್ದರು. ಇತ್ತೀಚೆಗೆ ೫೦ ಸಾವಿರ ಹಣವನ್ನು ಪಾವತಿಸಿ ಉಳಿದ ಮೂರು ಲಕ್ಷ ಹಣಕ್ಕೆ ಚೆಕ್ ನೀಡಿದ್ದರು. ಆದರೆ ತಿಂಗಳ ನಂತರ ಈ ಚೆಕ್ ಬ್ಯಾಂಕ್‌ನಲ್ಲಿ ಅಮಾನ್ಯಗೊಂಡಿತ್ತು. ಈ ಬಗ್ಗೆ ಮಾಲೀಕರನ್ನು ಪಂಚಾಯಿತಿಯ ಸಿಬ್ಬಂದಿಗಳು ಕಾರಣ ಕೇಳಿದಾಗ ಮಾಲೀಕ ಉಡಾಫೆಯ ಮಾತನಾಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಅಂಗಡಿ ಮಾಲೀಕರ ಬಳಿ ಹಲವು ಬಾರಿ ತೆರಳಿ ತೆರಿಗೆ ಹಣವನ್ನು ಪಾವತಿಸುವಂತೆ ಮನವಿ ಮಾಡಿದ್ದರೂ ತೆರಿಗೆ ಹಣ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಕಚೇರಿ ಸಿಬ್ಬಂದಿಗಳು ಪಂಚಾಯಿತಿಗೆ ದೂರು ನೀಡಿದ್ದರು. ಈ ವಿಚಾರದಲ್ಲಿ ಮಾಸಿಕ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದು ಅಂತಿಮವಾಗಿ ಅಂಗಡಿ ಮಳಿಗೆಗೆ ಬೀಗ ಜಡಿಯಲು ನಿರ್ಧಾರ ಕೈಗೊಂಡಿದ್ದರು. ಪೊಲೀಸರ ಸಮ್ಮುಖದಲ್ಲಿ ತೆರಳಿದ ಪಂಚಾಯಿತಿ ಆಡಳಿತ ಮಂಡಳಿ, ಪಿಡಿಓ ಹಾಗೂ ಸಿಬ್ಬಂದಿಗಳು ಅಂಗಡಿ ಮಳಿಗೆಗೆ ಬೀಗ ಜಡಿದು ನೋಟೀಸು ಅಂಟಿಸಿದ್ದಾರೆ. ಈ ವೇಳೆ ಪಂಚಾಯಿತಿಯ ಅಧ್ಯಕ್ಷರಾದ ಚೈತ್ರ, ಸದಸ್ಯರುಗಳಾದ ಬಿ.ಎನ್.ಪ್ರಕಾಶ್, ಹಕೀಮ್, ಕೆ.ರಾಜೇಶ್, ಸೌಮ್ಯಬಾಲು, ಪುಷ್ಪ, ಜಿ.ಕೆ.ಗೀತಾ, ರಾಮ್‌ದಾಸ್, ಕೊಣಿಯಂಡ ಬೋಜಮ್ಮ, ಪಂಚಾಯಿತಿ ಪಿಡಿಓ ತಿಮ್ಮಯ್ಯ, ಸಿಬ್ಬಂದಿಗಳಾದ ರಾಜು, ಸತೀಶ್, ಸುಬ್ರಮಣಿ, ಸೇರಿದಂತೆ ಪೊಲೀಸರು ಉಪಸ್ಥಿತರಿದ್ದರು.

ಗ್ರಾಮ ಪಂಚಾಯಿತಿಯ ನೂತನ ಪಿಡಿಓ ತಿಮ್ಮಯ್ಯ ಕೆಲವು ಕಠಿಣ ತೀರ್ಮಾನಗಳನ್ನು ಕೈಗೊಳ್ಳುವ ಮೂಲಕ ಪಂಚಾಯಿತಿಗೆ ಬರಬೇಕಾದ ತೆರಿಗೆ ವಸೂಲಾತಿಗೆ ನಿರ್ಧಾರ ಕೈಗೊಂಡಿದ್ದಾರೆ.

-ಹೆಚ್.ಕೆ. ಜಗದೀಶ್