ಶನಿವಾರಸಂತೆ, ಅ. ೨೯: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾತೆ ಗ್ರಾಮದಲ್ಲಿ ಆದರ್ಶ ಗ್ರಾಮ ಯೋಜನೆಯಡಿ ನಿರ್ಮಾಣ ವಾಗುತ್ತಿರುವ ಅಂಗನವಾಡಿ ಹಾಗೂ ಶೌಚಾಲಯ ಕಟ್ಟಡದ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದೆ ಎಂದು ಪಂಚಾಯಿತಿ ಆಡಳಿತ ಮಂಡಳಿಯವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವ ಬಗ್ಗೆ ಗ್ರಾಮಸ್ಥರು ಪಂಚಾಯಿತಿ ವಾರ್ಡ್ ಸಭೆಯಲ್ಲಿ ಪ್ರಸ್ತಾಪಿಸಿ ಚರ್ಚಿಸಿದ ಹಿನ್ನೆಲೆಯಲ್ಲಿ ಪಂಚಾಯಿತಿ ಆಡಳಿತ ಮಂಡಳಿಯವರು ಪರಿಶೀಲನೆ ನಡೆಸಿದರು.
ನಿರ್ಮಿತಿ ಕೇಂದ್ರ ಕಟ್ಟಡ ನಿರ್ಮಾಣದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು, ಇದರ ಗುಣಮಟ್ಟ ಪರಿಶೀಲನೆಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವುದಾಗಿ ಅಧ್ಯಕ್ಷೆ ವಿನಾದಾ ಹಾಗೂ ಪಿಡಿಓ ಹರೀಶ್ ತಿಳಿಸಿದರು.
ಉಪಾಧ್ಯಕ್ಷೆ ಪಾವನಾ, ಸದಸ್ಯರಾದ ಮೋಕ್ಷಿತ್ ರಾಜ್, ಹನೀಫ್, ದಾಕ್ಷಾಯಿಣಿ ಕಾಮಗಾರಿ ಪರಿಶೀಲನೆ ಸಂದರ್ಭ ಹಾಜರಿದ್ದರು.
ನಿರ್ಮಿತಿ ಕೇಂದ್ರ ಕಟ್ಟಡ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಇದರ ಬಗ್ಗೆ ಮಾಹಿತಿ ಹಕ್ಕಿನಡಿ ಮಾಹಿತಿ ಪಡೆದು ತನಿಖೆ ನಡೆಸಲು ಲೋಕಾಯುಕ್ತಕ್ಕೆ ಅರ್ಜಿ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಸದಸ್ಯ ಎಂ. ಹನೀಫ್ ಆಗ್ರಹಿಸಿದ್ದಾರೆ.