ಮಡಿಕೇರಿ, ಅ. ೨೮: ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ, ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಮಡಿಕೇರಿ ತಾಲೂಕಿನ ಮೇಕೇರಿಯಲ್ಲಿ ಆಯೋಜನೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾರ್ಯದರ್ಶಿ ಸುಬ್ರಮಣ್ಯ ಎನ್. ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಮಾಜದಲ್ಲಿ ಪ್ರತಿಯೊಬ್ಬರಿಗೂ ಕಾನೂನು ಮತ್ತು ಕಾನೂನಿನ ಅರಿವಿನ ಅವಶ್ಯಕತೆ ಇದೆ. ಕಾನೂನಾತ್ಮಕವಾಗಿ ಹೇಗೆ ಸಮಸ್ಯೆಯನ್ನು ಇತ್ಯರ್ಥ ಪಡಿಸಿಕೊಳ್ಳಬೇಕು ಎಂಬ ಸಾಮಾನ್ಯ ಅರಿವನ್ನು ತಿಳಿದುಕೊಂಡರೆ ಸಮಾಜದಲ್ಲಿ ಕಾನೂನಿಗೆ ಗೌರವ ನೀಡಿದಂತೆ ಆಗುತ್ತದೆ, ಎಲ್ಲರೂ ಕಾನೂನಿನ ಸಾಮಾನ್ಯ ಅರಿವನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಮತ್ತೋರ್ವ ಅತಿಥಿ ಮಡಿಕೇರಿ ವಕೀಲ ಸಂಘದ ಅಧ್ಯಕ್ಷ ದಯಾನಂದ ಅವರು ಮಾತನಾಡಿ, ಸಮಾಜದಲ್ಲಿ ಸಮಾನತೆಯ ಜೊತೆಗೆ ಸರ್ವರೂ ಕೂಡ ಕಾನೂನಿನ ಅರಿವನ್ನು ಬೆಳೆಸಿಕೊಳ್ಳಬೇಕು ಎಂದರು. ವಕೀಲ ಕುಂಞ ಅಬ್ದುಲ್ಲಾ ಕಾನೂನಿನ ವ್ಯಾಪ್ತಿಯಲ್ಲಿ ಬರುವ ಹಲವು ವಿಚಾರಗಳ ಪೈಕಿ ಕೆಲವೊಂದು ವಿಚಾರಗಳ ಸಾಮಾನ್ಯ ಜ್ಞಾನವನ್ನು ನಾವುಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನುಡಿದರು.

ಇನ್ನೋರ್ವ ಅತಿಥಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ಸಮಾಜದಲ್ಲಿ ಎಲ್ಲರಿಗೂ ಕಾನೂನಿನ ಅರಿವು ಈಗಿನ ಕಾಲದಲ್ಲಿ ಬಹಳ ಮುಖ್ಯ. ಹೆಣ್ಣಿನ ಮೇಲೆ ವಿಶೇಷವಾದ ಗಮನವನ್ನು ಪೋಷಕರು ಇಡಬೇಕು ಎಂದರು. ಹಿರಿಯ ವಕೀಲರಾದ ಮೀನಾ ಕುಮಾರಿ, ಮಾನವ ಹಕ್ಕುಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕೃಷ್ಣ, ಸಭಾಧ್ಯಕ್ಷರಾದ ರಕ್ಷಿತ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ಗಣ್ಯರನ್ನು ಸನ್ಮಾನಿಸಿ,ಮಾನವ ಹಕ್ಕುಗಳ ಕುರಿತಾದ ಜವಾಬ್ದಾರಿ ನಿರ್ವಹಣೆಯ ಗುರುತಿನ ಚೀಟಿಯನ್ನು ನ್ಯಾಯಾಧೀಶರ ಮೂಲಕ ವಿತರಿಸಲಾಯಿತು.

ವೇದಿಕೆಯಲ್ಲಿ ಪ್ರಕಾಶ್, ಕೃಷ್ಣ, ರಮೇಶ್, ಕುಶ ಹಾಗೂ ಪಂಚಾಯತ್ ಪಿಡಿಒ ಮಧು ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ರಶ್ಮಿ ಭರತ್ ಸ್ವಾಗತಿಸಿದರು, ಅರುಣ್ ಕುಮಾರ್ ಪಿ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.