ಮಡಿಕೇರಿ, ಅ. ೨೯: ಕೊಡಗು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಮಡಿಕೇರಿ ಇವರ ಸಹಯೋಗದಲ್ಲಿ ಸ್ವಾತಂತ್ರö್ಯ ವೀರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರ ಹುತಾತ್ಮ ದಿನಾಚರಣೆ ಪ್ರಯುಕ್ತ ತಾ. ೩೧ರಂದು (ನಾಳೆ) ೯.೩೦ ಗಂಟೆಗೆ ಮಡಿಕೇರಿ ಸುದರ್ಶನ ವೃತ್ತದಲ್ಲಿರುವ ಅಪ್ಪಯ್ಯಗೌಡರ ಸ್ಮಾರಕದಲ್ಲಿ ಪುಷ್ಪ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಂತರ ಮಡಿಕೇರಿಯ ಕೋಟೆ ಆವರಣದ ಅಪ್ಪಯ್ಯ ಗೌಡರು ಹುತಾತ್ಮರಾದ ಸ್ಥಳದಲ್ಲಿ ಪುಷ್ಪ ನಮನ ಸಲ್ಲಿಸಲಾಗುವುದು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಲಕ್ಷೀನಾರಾಯಣ ಕಜೆಗದ್ದೆ ಅವರು ತಿಳಿಸಿದರು.

ಇಂದು ನಗರದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಬ್ರಿಟೀಷರ ವಿರುದ್ಧ ಹೋರಾಡಿದ ಕಾರಣಕ್ಕಾಗಿ ಮಡಿಕೇರಿಯ ಕೋಟೆ ಆವರಣದಲ್ಲಿ ಅಪ್ಪಯ್ಯ ಗೌಡರ ಮನೆಯವರು ಮತ್ತು ಸಾರ್ವಜನಿಕ ರೆದುರು ಸ್ವಾತಂತ್ರö್ಯ ವೀರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ೧೮೩೭ ಅಕ್ಟೋಬರ್ ೩೧ರಂದು ನೇಣಿಗೆ ಏರಿಸಲಾಯಿತು ಎಂಬ ಸತ್ಯವು ಇತಿಹಾಸದಿಂದ ತಿಳಿದುಬರುತ್ತದೆ. ಪ್ರಾಣ ತ್ಯಾಗ ಮಾಡಿದ ವೀರ ಪುರುಷ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಹುತಾತ್ಮ ದಿನವನ್ನು ಅಕ್ಟೋಬರ್ ೩೧ರಂದು ಆಚರಿಸ ಲಾಗುತ್ತದೆ. ಸ್ವಾತಂತ್ರö್ಯ ಭಾರತದ ೭೫ನೇ ವರ್ಷದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಅಮರ ಸುಳ್ಯ ಹೋರಾಟದ ಹುತಾತ್ಮ ವೀರ ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ನೆನಪಿಸಿ ಕೊಳ್ಳುವುದು, ಬಲಿದಾನವನ್ನು ಗೌರವಿಸುವುದು, ನಾಡಿನ ಪ್ರತಿಯೊಬ್ಬ ದೇಶಪ್ರೇಮಿಯ ಕರ್ತವ್ಯವಾಗಿದೆ ಎಂದರು. ಗುಡ್ಡೆಮನೆ ಅಪ್ಪಯ್ಯಗೌಡರ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆ ಹೊರತಂದಿರುವ ವಿಶೇಷ ಅಂಚೆ ಲಕೋಟೆ ಕಾರ್ಯಕ್ರಮದಲ್ಲಿ ಲಭ್ಯವಿರುವುದಾಗಿ ಅವರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಳಿಯಪ್ಪ, ಚೊಕ್ಕಾಡಿ ಪ್ರೇಮ ರಾಘವಯ್ಯ, ಧÀನಂಜಯ ಅಗೋಳಿಕಜೆ ಹಾಗೂ ಡಾ. ದಯಾನಂದ ಕೂಡಕಂಡಿ ಉಪಸ್ಥಿತರಿದ್ದರು.