*ಸಿದ್ದಾಪುರ, ಅ. ೨೮: ಗ್ರಾಮದ ಪ್ರತಿಯೊಂದು ಕುಟುಂಬಕ್ಕೂ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆ ಜಲಜೀವನ್ ಮಿಷನ್ ಜಿಲ್ಲೆಯಾದ್ಯಂತ ಅನುಷ್ಠಾನ ಗೊಳ್ಳುತ್ತಿದೆ.

ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ.ನ ತ್ಯಾಗತ್ತೂರು ಭಾಗದಲ್ಲಿ ಯೋಜನೆ ಅಂತಿಮ ಹಂತಕ್ಕೆ ತಲುಪಿದೆ. ಇದೇ ಗ್ರಾ.ಪಂ. ವ್ಯಾಪ್ತಿಯ ತ್ಯಾಗತ್ತೂರಿನಲ್ಲಿ ತ್ವರಿತಗತಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಯೋಜನೆ ಉದ್ಘಾಟನೆಗೊಳ್ಳಲಿದೆ. ಟ್ಯಾಂಕ್ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಸುಮಾರು ೨೮೫ ಮನೆಗಳಿಗೆ ಈ ಯೋಜನೆಯಿಂದ ಕುಡಿಯುವ ನೀರು ದೊರೆಯಲಿದೆ.

ಎಲ್ಲಾ ಮನೆಗಳಿಗೆ ನೀರು ಬಳಕೆಯ ಮೀಟರ್ ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ಇದಕ್ಕಾಗಿ ತಲಾ ರೂ. ೭೫೦ ಶುಲ್ಕ ಸಂಗ್ರಹಿಸಲಾಗುತ್ತಿದ್ದು, ಗ್ರಾಮಸ್ಥರು ಸಹಕಾರ ನೀಡಿದ್ದಾರೆ. ನೀರು ಮತ್ತು ಮನೆ ಕಂದಾಯ ಸಂಗ್ರಹದಲ್ಲಿ ಶೇ. ೧೦೦ ರ ಸಾಧನೆ ಮಾಡಲಾಗಿದ್ದು, ಆದಾಯ ಗಳಿಕೆಯಲ್ಲಿ ಯಶಸ್ಸು ಸಾಧಿಸಲಾಗಿದೆ. ಈ ಕಾರಣದಿಂದ ಸರ್ಕಾರದ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಲು ಸಹಕಾರಿಯಾಗುತ್ತಿದೆ. ನೀರಿನ ಮೀಟರ್ ಅಳವಡಿಕೆಯಿಂದ ಗ್ರಾ.ಪಂ. ಆದಾಯವೂ ಹೆಚ್ಚಾಗಲಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಪೂರಕ ವಾತಾವರಣ ಸೃಷ್ಟಿಯಾಗುತ್ತದೆ.