ಮುಳ್ಳೂರು, ಅ. ೨೭: ರೋಟರಿ ಇಂಡಿಯಾ ಮಹತ್ವಾಕಾಂಕ್ಷೆಯ ಪೋಲಿಯೋ ನಿರ್ಮೂಲನೆ ಕಾರ್ಯಕ್ರಮದಡಿಯಲ್ಲಿ ಪೋಲಿಯೋ ನಿರ್ಮೂಲನೆ ದಿನದ ಅಂಗವಾಗಿ ಭಾನುವಾರ ಆಲೂರುಸಿದ್ದಾಪುರ ರೋಟರಿ ಮಲ್ಲೇಶ್ವರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಪೋಲಿಯೋ ನಿರ್ಮೂಲನೆ ಬಗ್ಗೆ ಮಾಹಿತಿ ಮತ್ತು ಜನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಯಿತು. ಆಲೂರು-ಸಿದ್ದಾಪುರ ಪಿಎಚ್‌ಸಿ ಆಡಳಿತ ವೈದ್ಯಾಧಿಕಾರಿ ಡಾ.ಸುಪರ್ಣ ಕೃಷ್ಣಾನಂದ್ ಕಾರ್ಯಕ್ರಮ ಉದ್ಘಾಟಿಸಿ ಮಾಹಿತಿ ನೀಡಿ-ಪೋಲಿಯೋ ಜಗತ್ತನ್ನು ಕಾಡಿದ ಮಹಾಮಾರಿ ಯಾಗಿದ್ದು ಭಾರತ ದಲ್ಲಿಯೂ ಪೋಲಿಯೋ ವ್ಯಾಪಿಸಿ ಬಹುದೊಡ್ಡ ಮಹಾ ಪಿಡುಗಾಗಿ ಜನರನ್ನು ಕಾಡಿತು ೧೯೦೫ರಲ್ಲಿ ಪೋಲಿಯೋಗೆ ಔಷಧಿ ಕಂಡು ಹಿಡಿಯಲಾಯಿತು.

ಪೋಲಿಯೋಗೆ ಔಷಧಿ ಕಂಡು ಹಿಡಿದಾದ ಮೇಲೆ ಅದರ ಲಸಿಕೆಯನ್ನು ಜಗತ್ತಿನ ದೇಶಗಳಿಗೆ ರೋಟರಿ ಸಂಸ್ಥೆ ವಿತರಣೆ ಮಾಡುವ ವೆಚ್ಚವನ್ನು ಹೊತ್ತುಕೊಂಡು ಇಂದಿನವರೆಗೂ ವಿಶ್ವದಾದ್ಯಂತ ರೋಟರಿ ಸಂಸ್ಥೆಯು ಪೋಲಿಯೋ ಲಸಿಕೆಗಾಗಿ ಸಾವಿರಾರು ಮಿಲಿಯನ್ ಡಾಲರ್ ವೆಚ್ಚ ಮಾಡಿ ಲಸಿಕೆ ವಿತರಿಸುತ್ತಿದೆ ಎಂದರು.

ಪೋಲಿಯೋ ನಿರ್ಮೂಲನೆ ಆಗಿರುವಂತೆ ಕಳೆದ ೨ ವರ್ಷಗಳಿಂದ ನಾವು ಎದುರಿಸುತ್ತಿರುವ ಕೋವಿಡ್-೧೯ ಪಿಡುಗನ್ನು ನಿರ್ಮೂಲನೆ ಮಾಡಲು ಸರಕಾರ, ಆರೋಗ್ಯ ಇಲಾಖೆ ಜೊತೆಯಲ್ಲಿ ರೋಟರಿಯಂತ ಸಂಘ-ಸAಸ್ಥೆ ಹಾಗೂ ಸಾರ್ವಜನಿಕರು ಸಹಕರಿಸಿ ಕೈಜೋಡಿಸಿದರೆ ಖಂಡಿತವಾಗಲೂ ಕೋವಿಡ್ ಪಿಡುಗು ನಿರ್ಮೂಲನೆ ಮಾಡಬಹುದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಮಲ್ಲೇಶ್ವರ ಕ್ಲಬ್ ಅಧ್ಯಕ್ಷ ಎಂ.ಇ. ವೆಂಕಟೇಶ್ ಮಾತನಾಡಿ, ರೋಟರಿ ಸಮಾಜ ಸೇವೆ ಕಾರ್ಯ ಮಾಡುತ್ತಿದ್ದು ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ವೈದ್ಯರು, ಸಿಬ್ಬಂದಿಗಳ ಸೇವೆ ಬಹುದೊಡ್ಡದಾಗಿದೆ ಎಂದರು. ಸಮಾಜ ರಕ್ಷಣೆಯನ್ನು ಪೊಲೀಸರು ನಿಭಾಯಿಸಿದರೆ ಜನರ ಆರೋಗ್ಯ ರಕ್ಷಣೆಯನ್ನು ಆರೋಗ್ಯ ಸಿಬ್ಬಂದಿಗಳು ಮಾಡುತ್ತಿರುವ ಸೇವೆ ಶ್ಲಾಘನೀಯ ಎಂದರು.

ಕಾರ್ಯಕ್ರಮದ ಕುರಿತು ರೋಟರಿ ಸದಸ್ಯ ಜಿ.ಎಂ. ಹೇಮಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಲೋಕೇಶ್, ಆರೋಗ್ಯ ಪರಿವೀಕ್ಷಕ ಪ್ರವೀಣ್‌ಕುಮಾರ್ ಹಾಜರಿದ್ದರು.

ಕಾರ್ಯಕ್ರಮದಲ್ಲಿ ರೋಟರಿ ಮಲ್ಲೇಶ್ವರ ಕ್ಲಬ್ ಸರ್ವ ಸದಸ್ಯರು, ಸಂಸ್ಥೆಯ ನಿಕಟಪೂರ್ವ ಪದಾಧಿಕಾರಿಗಳು, ಕಿರಿಯ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ದಿನದ ಅಂಗವಾಗಿ ಆಲೂರು-ಸಿದ್ದಾಪುರದಿಂದ ಆಲದಮರ ಗ್ರಾಮ, ಮಾಲಂಬಿ ಕೂಡುರಸ್ತೆವರೆಗೆ ಸುಮಾರು ೩ ಕಿ.ಮೀ. ದೂರದವರೆಗೆ ರೋಟರಿ ಕ್ಲಬ್ ಸದಸ್ಯರು, ಆರೋಗ್ಯ ಕೇಂದ್ರದ ವೈದ್ಯರು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ದ್ವಿಚಕ್ರ ವಾಹನದಲ್ಲಿ ಜಾಥಾ ತೆರಳಿ ಜನ ಜಾಗೃತಿ ಮೂಡಿಸಿದರು.