ಕೂಡಿಗೆ, ಅ. ೨೭: ೬೬ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ‘ಕನ್ನಡಕ್ಕಾಗಿ ನಾವು’ ವಿಶೇಷ ಅಭಿಯಾನದ ಅಂಗವಾಗಿ ಬಾಲಕಿಯರ ಮೆಟ್ರಿಕ್ ನಂತರದ ಬಿ.ಸಿ.ಎಂ. ಹಾಸ್ಟೆಲ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗೀತಗಾಯನ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಿ. ಜೈವರ್ಧನ್ ಮಾತನಾಡಿ, ಪ್ರತಿಯೊಬ್ಬರೂ ನಾಡು-ನುಡಿ, ಕಲೆ- ಸಂಸ್ಕೃತಿ ಹಾಗೂ ಭಾಷೆಯ ಬೆಳವಣಿಗೆಗೆ ಶ್ರಮಿಸಬೇಕೆಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಮಾತೃಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಂಡು ನಾಡು- ನುಡಿಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮ ಸಂಯೋಜಕ ಮಣಜೂರು ಮಂಜುನಾಥ್, ‘ಕನ್ನಡಕ್ಕಾಗಿ ನಾವು' ಅಭಿಯಾನದ ಬಗ್ಗೆ ಮಾಹಿತಿಯಿತ್ತರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ. ಸುರೇಶ್, ಎಲ್ಲರೂ ಕನ್ನಡ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು. ಕಲಾವಿದ ಬಿ.ಸಿ. ಶಂಕರಯ್ಯ ನಾಡಗೀತೆ ಹಾಡಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದರಾದ ಪತ್ತಾರ್, ಗೋಪಿ ಮತ್ತು ಶ್ವೇತ ತಂಡದವರು ಗೀತ ಗಾಯನ ನಡೆಸಿಕೊಟ್ಟರು.