ವೀರಾಜಪೇಟೆ - ಆರ್ಜಿ ಗ್ರಾಮದ ಸ.ನಂ: ೩೧೫/೧ ರ ೮೯.೦೬ ಎಕರೆ ಗೋಮಾಳಕ್ಕೆ ಕಾಯ್ದಿರಿಸಿರುವ ಜಮೀನಾಗಿರುವುದರಿಂದ ಅದನ್ನು ಗೋಮಾಳವಾಗಿ ಉಳಿಸಿಕೊಳ್ಳುವುದು ಮಾತ್ರ ನಮ್ಮ ಸಂರಕ್ಷಣಾ ಸಮಿತಿಯ ಉದ್ದೇಶ.
೧೯೬೦ ರಲ್ಲಿ ಅಂದಿನ ಕೊಡಗು ಜಿಲ್ಲಾಧಿಕಾರಿಯವರು ವೀರಾಜಪೇಟೆ ತಾಲೂಕು, ಆರ್ಜಿ, ಬೇಟೋಳಿ ಮತ್ತು ಬಾಳುಗೋಡು ಗ್ರಾಮಗಳ ರೈತರ ದನ-ಕರುಗಳನ್ನು ಮೇಯಿಸಲು ಅನುಕೂಲವಾಗುವಂತೆ ಆರ್ಜಿ ಗ್ರಾಮದ ಪೈಸಾರಿ ಸ.ನಂ: ೩೧೫/೧ ರ ೮೯.೦೬ ಎಕರೆ ಜಮೀನನ್ನು ಗೋಮಾಳವಾಗಿ ಕಾಯ್ದಿರಿಸಿ, ಅದರ ಉದ್ಘಾಟನೆಯನ್ನು ತಾವೇ ನೆರವೇರಿಸಿದ್ದರು. ನಂತರ ಮಾಜಿ ಸೈನಿಕ ಕೆ.ಸಿ. ತಿಮ್ಮಯ್ಯ ಎಂಬವರು ಇದೇ ಸ.ನಂ: ೩೧೫/೧ ರಲ್ಲಿ ಜಾಗ ಮಂಜೂರು ಮಾಡಿಕೊಡಬೇಕೆಂದು ಅರ್ಜಿ ಸಲ್ಲಿಸಿದಾಗ ಅಂದಿನ ಜಿಲ್ಲಾಧಿಕಾರಿ ಇದು ಗೋಮಾಳವಾಗಿರುವುದರಿಂದ ಅವರ ಅರ್ಜಿಯನ್ನು ತಿರಸ್ಕರಿಸಿದರು.
ನಂತರ ಭಾರತ ಹಾಕಿ ತಂಡದ ನಾಯಕರಾಗಿದ್ದ ಎಂ.ಎA. ಸೋಮಯ್ಯ ಇದೇ ಸರ್ವೆ ನಂಬರಿನಲ್ಲಿ ಜಾಗ ಮಂಜೂರು ಮಾಡಿಕೊಡಬೇಕೆಂದು ಸರ್ಕಾರದಿಂದ ಪತ್ರ ಬಂದಿದೆ ಎಂಬ ಕಾರಣಕ್ಕಾಗಿ ೮.೦೦ ಎಕರೆ ಜಮೀನನ್ನು ಎಂ.ಎA. ಸೋಮಯ್ಯ ಅವರಿಗೆ ಮಂಜೂರು ಮಾಡಿರುತ್ತಾರೆ. ಆದರೆ ಈ ವಿಷಯದಲ್ಲಿ ತಮ್ಮ ಕೋರಿಕೆಯನ್ನು ತಿರಸ್ಕರಿಸಿ ಎಂ.ಎA. ಸೋಮಯ್ಯ ಅವರಿಗೆ ಜಮೀನು ಮಂಜೂರು ಮಾಡಿರುವುದನ್ನು ಕೆ.ಸಿ. ತಿಮ್ಮಯ್ಯನವರು ಮೊದಲಿಗೆ ಕರ್ನಾಟಕ ಅಪಲೇಟ್ ಟ್ರಿಬ್ಯುನಲ್ನಲ್ಲಿ ಪ್ರಶ್ನಿಸಿದಾಗ ಕೆ.ಎ.ಟಿ.ಯವರು ಜಿಲ್ಲಾಧಿಕಾರಿಯವರ ಆದೇಶವನ್ನು ಎತ್ತಿಹಿಡಿದಿರುತ್ತದೆ. ನಂತರ ಕೆ.ಸಿ. ತಿಮ್ಮಯ್ಯ ಅವರು ಈ ಆದೇಶವನ್ನು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಮಂಜೂರಾತಿ ಮಾಡಿದ ಕಡತವನ್ನು ತರಿಸಿಕೊಂಡು, ವಾದ-ವಿವಾದಗಳು ಮುಗಿದ ನಂತರ ಆರ್ಜಿ ಗ್ರಾಮದ ಸರ್ವೆ ನಂ: ೩೧೫/೧ರ ೮೯.೦೬ ಎಕರೆ ಗೋಮಾಳವೆಂದು ಕಂಡು ಬಂದಿದ್ದರಿAದ ಕೊಡಗು ಜಿಲ್ಲಾಧಿಕಾರಿಯವರ ಮಂಜೂರಾತಿ ಆದೇಶ ಮತ್ತು ಅದನ್ನು ಎತ್ತಿ ಹಿಡಿದ ಕೆ.ಎ.ಟಿ.ಯವರ ಆದೇಶ ಇವೆರಡನ್ನು ರಿಟ್ ಅರ್ಜಿ ಸಂ: ೨೪೦೩/೧೯೮೪, ದಿ: ೨೯.೦೫.೧೯೯೦ ರಲ್ಲಿ ವಜಾ ಮಾಡಿರುತ್ತದೆ. ಆದರೆ ಉಚ್ಚ ನ್ಯಾಯಾಲಯದ ಈ ಆದೇಶದಿಂದ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಾಗಿತ್ತು, ಅದಾಗಲಿಲ್ಲ.
ತದನಂತರ ಜಿಲ್ಲಾಡಳಿತ ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ೫.೦೦ ಎಕರೆ, ಆಶ್ರಯ ಯೋಜನೆಗೆ ೩.೦೦ ಎಕರೆ, ಪೊಲೀಸ್ ವಸತಿ ಗೃಹಕ್ಕೆ ೪.೦೦ ಎಕರೆ, ಮೊರಾರ್ಜಿ ದೇಸಾಯಿ ಶಾಲೆಗೆ ೫.೦೦ ಎಕರೆ, ವಾಲ್ಮೀಕಿ-೨-ಭವನಕ್ಕೆ ೦.೫೦ ಸೆಂಟ್ಸ್ ಮತ್ತು ಇತ್ತೀಚೆಗೆ ಮುಸಲ್ಮಾನರ ಸ್ಮಶಾನಕ್ಕೆ ೨.೦೦ ಎಕರೆ, ಎಂ.ಎಸ್. ಉತ್ತಪ್ಪ ಎಂಬವರಿಗೆ ೮.೦೦ ಎಕರೆ, ಕೆ.ಎಸ್.ಆರ್.ಟಿ.ಸಿ.ಗೆ ೩.೦೦ ಎಕರೆ ಮತ್ತೆ ಹೊರ ಜಿಲ್ಲೆಯವರಿಗೆ, ಹೊರ ರಾಜ್ಯದವರಿಗೆ ಅವರ ಊರಿನಲ್ಲಿ ಜಮೀನಿದ್ದರೂ ಯಾವುದೇ ಪರಿಶೀಲನೆ ನಡೆಸದೆ ಉಚ್ಚ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮಂಜೂರು ಮಾಡಿರುತ್ತದೆ ಮತ್ತು ಒತ್ತುವರಿಗೆ ಅವಕಾಶ ಕೊಟ್ಟಿರುತ್ತದೆ. ತಾವೇ ಕಾನೂನು ಉಲ್ಲಂಘನೆ ಮಾಡಿರುವುದಲ್ಲದೆ ಸ.ನಂ: ೩೧೫/೧ರ ಜಮೀನು ೮೯.೦೬ ಎಕರೆ ಗೋಮಾಳ ಆಗಿರುತ್ತದೆ ಎಂಬುದು ಸಾರ್ವಜನಿಕರಿಗೆ ತಿಳುವಳಿಕೆ ಕೊಡಬೇಕಾಗಿದ್ದ ಜಿಲ್ಲಾಡಳಿತ ಈ ಜಮೀನಿನಲ್ಲಿ ಒತ್ತುವರಿ ಮಾಡಿಕೊಳ್ಳಲು ತಾವೇ ಆಸ್ಪದ ಕೊಟ್ಟಿದೆ. ಜಿಲ್ಲಾಡಳಿತದೊಂದಿಗೆ ತಿಳುವಳಿಕೆ ಇಲ್ಲದ ಕೆಲವು ಜನಪ್ರತಿನಿಧಿಗಳೂ ಸಹ ಸೇರಿಕೊಂಡಿದ್ದು, ಈ ವಿಚಾರ ಇನ್ನಷ್ಟು ಬಿಗಡಾಯಿಸಿದೆ.
ಅಂತಿಮವಾಗಿ ಕರ್ನಾಟಕ ಉಚ್ಚ ನ್ಯಾಯಾಲಯ ರಿಟ್ ಪಿಟಿಷನ್ ಸಂ: ೩೯೫೩/೨೦-೨೧ (ಏಐಖ-ಖಇS-PIಐ)ನ ತನ್ನ ದಿನಾಂಕ: ೧೫.೦೩.೨೦೨೧ ರ ಆದೇಶದಲ್ಲಿ ಕಂದಾಯ ಇಲಾಖೆ ಆರ್ಜಿ ಗ್ರಾಮದ ಸ.ನಂ: ೩೧೫/೧ ರ ೮೯.೦೬ ಎಕರೆ ಪೈಕಿ ೪೭.೪೭ ಎಕರೆ ಜಮೀನನ್ನು ಗೋಮಾಳವಾಗಿಯೇ ಉಳಿಸಿಕೊಳ್ಳಬೇಕೆಂದು ಆದೇಶಿಸಿರುತ್ತದೆ. ಆದ್ದರಿಂದ ಜಿಲ್ಲಾಡಳಿತ ಈ ೪೭.೪೭ ಎಕರೆ ಮತ್ತು ಈ ಸರ್ವೆ ನಂಬರಿನಲ್ಲಿ ಉಳಿದಿರುವ ೪೧.೫೯ ಎಕರೆ ಪೈಕಿ ಸಾರ್ವಜನಿಕ ಉಪಯೋಗಕ್ಕೆ ಮಂಜೂರು ಮಾಡಿರುವ ಜಮೀನು ಹೊರತುಪಡಿಸಿ ಉಳಿಕೆ ಜಮೀನಿನಲ್ಲಿ ಒತ್ತುವರಿ ಮಾಡಿಕೊಂಡಿರುವುದನ್ನು ಖುಲ್ಲಾಪಡಿಸಿ ಉಳಿದ ಜಮೀನನನ್ನು ಸಹ ಗೋಮಾಳವನ್ನಾಗಿಯೇ ಉಳಿಸಿಕೊಡಬೇಕೆಂದು ಆಗ್ರಹಿಸಿರುತ್ತೇವೆ. ಆರ್ಜಿ ಗ್ರಾಮದ ಸ.ನಂ: ೩೧೫/೧ ರ ೮೯.೦೬ ಎಕರೆ ಗೋಮಾಳಕ್ಕೆ ಕಾಯ್ದಿರಿಸಿರುವ ಜಮೀನಾಗಿರುವುದರಿಂದ ಅದನ್ನು ಗೋಮಾಳವಾಗಿ ಉಳಿಸಿ ಕೊಳ್ಳುವುದು ಮಾತ್ರ ನಮ್ಮ ಸಂರಕ್ಷಣಾ ಸಮಿತಿಯ ಉದ್ದೇಶ.
- ಬಿ.ಕೆ. ರಾಮಯ್ಯ, ಅಧ್ಯಕ್ಷ, ಕೆ.ಎಸ್. ಅಯ್ಯಣ್ಣ, ಕಾರ್ಯದರ್ಶಿ, ಉದಯಕುಮಾರ್, ಸಹಕಾರ್ಯದರ್ಶಿ, ಬಿ.ಆರ್. ಗಣೇಶ್, ಬಿ.ಜಿ. ಜೀವನ್, ಆರ್ಜಿ - ತೆರ್ಮೆಕಾಡು, ಗೋಮಾಳ ಸಂರಕ್ಷಣಾ ಸಮಿತಿ.