*ಗೋಣಿಕೊಪ್ಪ, ಅ. ೨೭: ಕಾನೂರು ಕೃಷಿಪತ್ತಿನ ಸಹಕಾರ ಸಂಘದ ಕಾಫಿ ತೋಟದಿಂದ ಕಾಫಿ ಕಳವು ಮಾಡಲಾಗಿದೆ ಎಂಬ ಸದಸ್ಯರೊಬ್ಬರ ಆರೋಪ ಸಮರ್ಥನೀಯವಲ್ಲ ಎಂದು ಸಂಘದ ಮಾಜಿ ಅಧ್ಯಕ್ಷರುಗಳು ಸ್ಪಷ್ಟಪಡಿಸಿದ್ದಾರೆ.

ಕಾನೂರಿನ ಫ್ರೆಂಡ್ಸ್ ಕ್ಲಬ್ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಮಚ್ಚಮಾಡ ಕಂದಾಭೀಮಯ್ಯ, ಚೆಪುö್ಪಡಿರ ಎಸ್. ಸೋಮಯ್ಯ, ಅಳಮೇಂಗಡ ತಮ್ಮಯ್ಯ, ಕುಂಞÂಮಾಡ ಸದಾಶಿವ, ಚೊಟ್ಟೆಯಕ್‌ಮಾಡ ರಾಜೀವ್ ಬೋಪಯ್ಯ, ಮಾಚಿಮಾಡ ಸತೀಶ್, ಕಾಡ್ಯಮಾಡ ಅಯ್ಯಪ್ಪ ಸೇರಿದಂತೆ ಇನ್ನಿತರರು ಸಂಘದ ಕಾಫಿ ತೋಟದಲ್ಲಿನ ಕಾಫಿ ಕಳುವಿನ ಆರೋಪದ ಬಗ್ಗೆ ಮಾತನಾಡಿ, ಸದಸ್ಯ ಧನಂಜಯ್ ಅವರು ವಿನಾಕಾರಣ ಆರೋಪಿಸಿ ಕಳಂಕ ತರಲಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

ಸಂಘದ ಸದಸ್ಯ ಧನುಂಜಯ್ ಅವರು ಸಂಘದ ಅಧ್ಯಕ್ಷರ ಮೇಲಿನ ವೈಯಕ್ತಿಕ ದ್ವೇಷದಿಂದ ಈ ವ್ಯರ್ಥ ಆರೋಪವನ್ನು ಮಾಡಿದ್ದಾರೆ. ಇದನ್ನು ಕಾನೂನಾತ್ಮಕ ಹೋರಾಟದಿಂದ ಇತ್ಯರ್ಥಪಡಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಇದೇ ತಿಂಗಳ ೧೯ರಂದು ಸಂಘದ ಮಹಾಸಭೆಯನ್ನು ನಡೆಸಲಾಯಿತು. ೧೫೦೦ ಸದಸ್ಯರನ್ನು ಹೊಂದಿರುವ ಸಂಘದಲ್ಲಿ ೧೧೫೦ ಸದಸ್ಯರುಗಳು ಹಾಜರಾಗಿದ್ದರು. ಸಂಘದ ಮೇಲೆ ವ್ಯರ್ಥ ಆರೋಪ ಮಾಡುತ್ತಿರುವ ಸದಸ್ಯರು ಮಹಾಸಭೆಯಲ್ಲಿ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ಸಂಘದಲ್ಲಿ ನಡೆದ ಅವ್ಯವಹಾರದ ಬಗ್ಗೆ ಧ್ವನಿಯೆತ್ತದೆ ಮೌನವಹಿಸಿದ ಅವರು ಇತರ ಸದಸ್ಯರಲ್ಲಿ ಗೊಂದಲ ಉಂಟುಮಾಡಲು ಪತ್ರಿಕೆ ಹೇಳಿಕೆಗಳನ್ನು ನೀಡಿ ಸಂಘದ ವ್ಯವಹಾರಕ್ಕೆ ಭಂಗವನ್ನು ಉಂಟುಮಾಡಿದ್ದಾರೆ ಎಂದು ಹೇಳಿದರು.

ಕಾನೂರು ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬ್ರಹ್ಮಗಿರಿಪುರದಲ್ಲಿ ೫೦ ಎಕರೆ ಕಾಫಿ ತೋಟವಿದೆ. ತೋಟದ ನಿರ್ವಹಣೆಗೆ ಸಂಘದ ಅಧೀನದಲ್ಲೇ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯೇ ತೋಟದ ನಿರ್ವಹಣೆಯನ್ನು ನಡೆಸುತ್ತಿದೆ. ಅಧ್ಯಕ್ಷರೊಬ್ಬರೇ ತೋಟದ ನಿರ್ವಹಣೆಯನ್ನು ನಿಭಾಯಿಸುತ್ತಿಲ್ಲ ಎಂಬುವುದನ್ನು ಈ ಸಂದರ್ಭ ಸ್ಪಷ್ಟಪಡಿಸಿದ ಅವರು ಸಂಘದ ಶೇ. ೬೦ರಷ್ಟು ವ್ಯವಹಾರ ತೋಟದ ಆದಾಯದಿಂದಲೇ ನಡೆಸಲಾಗುತ್ತಿದೆ. ೧೯೭೫ರಿಂದಲೇ ಸಂಘದ ಸ್ವಾಧೀನದಲ್ಲಿ ಕಾಫಿ ತೋಟ ನಿರ್ವಹಣೆಯಾಗುತ್ತಿದೆ. ಈ ಹಿಂದಿನ ಅಧ್ಯಕ್ಷರುಗಳು ಸಹ ತೋಟದ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಿ ಕಾಫಿ ತೋಟದಿಂದ ಬರುವ ಆಧಾಯಕ್ಕೆ ಶ್ರಮಪಟ್ಟಿದ್ದಾರೆ. ಇದರಿಂದ ಸಂಘದ ಅಭಿವೃದ್ಧಿಯೊಂದಿಗೆ ಕಾನೂನು, ಕೋತೂರು ಭಾಗದ ಜನರಿಗೆ ಬಹು ಅನುಕೂಲವಾಗುತ್ತಿದೆ ಎಂದು ಹೇಳಿದರು.