ಮಡಿಕೇರಿ, ಅ. ೨೭: ಸಂತ ಮೈಕಲರ ಸಂಯುಕ್ತ ಪದವಿಪೂರ್ವ ಕಾಲೇಜು ಹಾಗೂ ಸಂತ ಮೈಕಲರ ಪ್ರೌಢಶಾಲಾ ಹಂತದಲ್ಲಿ ದ್ವಿತೀಯ ಪಿ.ಯು.ಸಿ. ಹಾಗೂ ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಸಂಸ್ಥೆಯ ಸಭಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ನೆರವೇರಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂತ ಮೈಕಲರ ವಿದ್ಯಾಸಂಸ್ಥೆಗಳ ಸಂಚಾಲಕ ಗುರುಗಳಾದ ನವೀನ್‌ಕುಮಾರ್ ಅವರು ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಸಂತ ಮೈಕಲರ ದೇವಾಲಯದ ಮುಖ್ಯ ಗುರುಗಳಾದ ಜಾರ್ಜ್ ದೀಪಕ್, ಕಾಲೇಜಿನ ಪ್ರಾಂಶುಪಾಲ ಕೆ.ಪಿ. ಗಣೇಶ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೆ.ಎ. ಜಾನ್ಸನ್ ಅವರು ಉಪಸ್ಥಿತರಿದ್ದರು.
ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಕೆ. ಅವ್ಯಕ್ತ ೬೦೦ ಅಂಕಗಳಲ್ಲಿ ೬೦೦ ಅಂಕಗಳನ್ನು, ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗದಲ್ಲಿ ಅಕ್ಷತಾದೇವಿ ೬೦೦ ರಲ್ಲಿ ೫೯೭ ಅಂಕಗಳನ್ನು ಪಡೆದಿರುತ್ತಾರೆ. ವಿದ್ಯಾಸಂಸ್ಥೆಗೆ ಕೀರ್ತಿ ತಂದ ಇವರನ್ನು ಸನ್ಮಾನಿಸಲಾಯಿತು. ಉನ್ನತ ಶ್ರೇಣಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ೧೮ ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ ೩೩ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಕೆ.ಎ. ಆಶಿಕ್ ಹೆಬ್ಬಾರ್ ೬೨೫ ಅಂಕಗಳಲ್ಲಿ ೬೧೧ ಅಂಕಗಳನ್ನು ಗಳಿಸಿರುತ್ತಾರೆ. ವಿದ್ಯಾಸಂಸ್ಥೆಯ ಪರವಾಗಿ ಇವರನ್ನು ಸನ್ಮಾನಿಸಲಾಯಿತು. ಅದೇ ರೀತಿ ೨೩ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.