*ಸಿದ್ದಾಪುರ, ಅ. ೨೮: ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ.ಯ ಗ್ರಾಮಸಭೆ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್. ಅನಿತಾ ಅಧ್ಯಕ್ಷತೆಯಲ್ಲಿ ನಡೆಯಿತು. ಗೊಂದಲದ ಗೂಡಾದ ಸಭೆಯ ಬಗ್ಗೆ ಆಕ್ಷೇಪಿಸಿದ ಗ್ರಾಮಸ್ಥರು ಇದು ಗ್ರಾಮ ಸಭೆಯಲ್ಲ ಡ್ರಾಮ ಸಭೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಆರೋಪಗಳು ಕೇಳಿಬಂದವು. ಗ್ರಾಮಸ್ಥರ ಯಾವುದೇ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡದೆ ಪಲಾಯನ ವಾದ ಮಂಡಿಸುತ್ತಿದ್ದಾರೆ ಎಂದು ಸಭೆಯಲ್ಲಿದ್ದವರು ಆರೋಪಿಸಿದರು.
ವಿವಿಧ ಸಮಸ್ಯೆಗಳ ಚರ್ಚೆಗೆ ಗ್ರಾಮಸಭೆಯೊಂದೇ ಸೀಮಿತ ವಾಗಬೇಕಾಗಿತ್ತು. ಆದರೆ ಜಮಾಬಂದಿ ಮತ್ತು ಸಾಮಾಜಿಕ ಲೆಕ್ಕ ಪರಿಶೋಧಕ ಸಭೆಯನ್ನು ಕೂಡ ಒಂದೇ ವೇದಿಕೆಯಲ್ಲಿ ನಡೆಸಲಾಯಿತು. ಸಭೆಗಳಿಗೆ ಸಂಬAಧಿಸಿದAತೆ ಮೂರು ಬಾರಿ ಬ್ಯಾನರ್ಗಳನ್ನು ಬದಲಾಯಿಸಲಾಯಿತು. ಕೊನೆಯಲ್ಲಿ ನಡೆದ ಗ್ರಾಮಸಭೆ ಸಂಜೆ ೪ ಗಂಟೆಯವರೆಗೂ ಮುಂದುವರೆಯಿತು.
ಸುಮಾರು ೨ ವರ್ಷಗಳ ನಂತರ ಗ್ರಾಮಸಭೆ ನಡೆಯುತ್ತಿದ್ದು, ಗ್ರಾಮದ ಸಮಗ್ರ ಸಮಸ್ಯೆಗಳ ಚರ್ಚೆಗೆ ಅವಕಾಶ ಸಿಗದೆ ಇರುವ ಬಗ್ಗೆ ಗ್ರಾಮಸ್ಥರು ಅತೃಪ್ತಿ ವ್ಯಕ್ತಪಡಿಸಿದರು.
ಗ್ರಾಮಸ್ಥರ ಅಹವಾಲುಗಳಿಗೆ ಅಭಿವೃದ್ಧಿ ಅಧಿಕಾರಿ ಸೂಕ್ತ ರೀತಿಯಲ್ಲಿ ಉತ್ತರ ನೀಡದೆ ಕೋಪ ಪ್ರದರ್ಶಿಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿ ಹಲವರು ಸಭೆಯಿಂದ ಹೊರ ನಡೆದರು.
ಸಭೆ ನಿಯಂತ್ರಣ ಕಳೆದುಕೊಳ್ಳುವ ಹಂತದಲ್ಲಿ ಗ್ರಾ.ಪಂ. ಸದಸ್ಯರುಗಳಾದ ಭುವನೇಂದ್ರ ಹಾಗೂ ಮನುಮಹೇಶ್ ತಾವೇ ಉತ್ತರಿಸಿ ಸಮಸ್ಯೆ ಪರಿಹಾರದ ಭರವಸೆ ನೀಡುವ ಮೂಲಕ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ಮಾಡಿದರು.
ಜ್ಯೋತಿ ನಗರದಲ್ಲಿ ನಡೆಯದೇ ಇರುವ ಕಾಮಗಾರಿಗೆ ೭೦ ಸಾವಿರ ರೂ.ಗಳ ಬಿಲ್ ಪಾವತಿಸಲಾಗಿದ್ದು, ಇದನ್ನು ವಾಪಾಸ್ಸು ಪಡೆಯಬೇಕೆಂದು ಒತ್ತಾಯಿಸಿದರು.
ಅಳತೆ ಪುಸ್ತಕ ನಾಪತ್ತೆಯಾಗಿರುವ ಬಗ್ಗೆ ಚರ್ಚಿಸಿ ವರ್ಷ ಕಳೆದಿದೆ. ಆದರೆ ಇಲ್ಲಿಯವರೆಗೆ ಪುಸ್ತಕ ಪತ್ತೆಯಾಗಿಲ್ಲ. ಗ್ರಾ.ಪಂ ಗೆ ನಷ್ಟವಾಗಿರುವ ತೆರಿಗೆ ಸೇರಿದಂತೆ ಸುಮಾರು ೩.೬೦ ಲಕ್ಷ ರೂ.ಗಳನ್ನು ಮರಳಿ ಪಡೆಯಬೇಕು ಎಂದು ಗ್ರಾಮಸ್ಥರು ಹೇಳಿದರು. ಅಡಕ್ ಸಮಿತಿ ಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಮಳೆಹಾನಿ ಸಂತ್ರಸ್ತರಿಗೆ ಜಮೀನು ಗುರುತಿಸಿ ನಿವೇಶನ ಹಂಚಿಕೆ ಮಾಡುವ ಪ್ರಸ್ತಾಪ ನೆನೆಗುದಿಗೆ ಬಿದ್ದಿದ್ದು, ತಕ್ಷಣ ಕಾರ್ಯೋನ್ಮುಖರಾಗಬೇಕೆಂದು ಕೆಲವರು ಆಗ್ರಹಿಸಿದರು.
ಜಲ ಜೀವನ್ ಮಿಷನ್ ಯೋಜನೆಯಡಿ ನೀರಿನ ಮೀಟರ್ಗೆ ಶುಲ್ಕ ವಿಧಿಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು ಯಾವುದೇ ಮೂಲಭೂತ ಸೌಲಭ್ಯಗಳನ್ನು ಗ್ರಾ.ಪಂ ನೀಡುತ್ತಿಲ್ಲ, ಅಭಿವೃದ್ಧಿ ಕಾರ್ಯಗಳು ಕೂಡ ನಡೆಯುತ್ತಿಲ್ಲ. ಆದ್ದರಿಂದ ಜಲ ಜೀವನ್ ಮೂಲಕ ಹಣ ಸಂಗ್ರಹಿಸುವ ಅಗತ್ಯವಿಲ್ಲವೆಂದರು.
ತ್ಯಾಗತ್ತೂರಿನಲ್ಲಿ ಸ್ತಿçÃಶಕ್ತಿ ಭವನ ನಿರ್ಮಾಣಕ್ಕೆ ಜಾಗ ಗುರುತಿಸಿ, ಕ್ರಿಯಾಯೋಜನೆ ರೂಪಿಸಲಾಗಿದೆ. ಆದರೆ ಎರಡು ವರ್ಷ ಕಳೆದರೂ ಕಾಮಗಾರಿ ಆರಂಭಗೊAಡಿಲ್ಲ ಎಂದು ಗ್ರಾಮಸ್ಥ ಮುಂಡ್ರಮನೆ ಜಯಂತ್ ಆರೋಪಿಸಿದರು.
ಆರೋಪದಿಂದ ನೊಂದು ವೇದಿಕೆಯಿಂದ ಕೆಳಗಿಳಿದ ಪಿಡಿಓ ಯಾರ ಮಾತಿಗೂ ಕಿವಿಗೊಡದೆ ತಮ್ಮ ಕಚೇರಿಯೊಳಗೆ ಸೇರಿಕೊಂಡರು. ವಂದನಾರ್ಪಣೆ ಇಲ್ಲದೆ ಸಭೆ ಪೂರ್ಣಗೊಂಡಿತು.
ಉಪಾಧ್ಯಕ್ಷೆ ಪಿ.ಎಸ್. ಸುಧಾ, ಕಾರ್ಯದರ್ಶಿ ರವಿ, ಜಿ.ಪಂ. ಅಭಿಯಂತರ ಫಯಾಜ಼್ ಅಹಮ್ಮದ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರವಿ, ಲೆಕ್ಕ ಪರಿಶೋಧಕ ಅಧಿಕಾರಿ ದಿನೇಶ್ ಹಾಗೂ ನೋಡಲ್ ಅಧಿಕಾರಿಯಾಗಿ ಪಶುವೈದ್ಯಾಧಿಕಾರಿ ಡಾ. ಸಂಜೀವಕುಮಾರ್ ಶಿಂಧೆ ಉಪಸ್ಥಿತರಿದ್ದರು. -ಅಂಚೆಮನೆ ಸುಧಿ