ಸೋಮವಾರಪೇಟೆ, ಅ. ೨೮: ಅರಣ್ಯ ಇಲಾಖೆ ಮೂಲಕ ಅನುಷ್ಠಾನಗೊಂಡ ಎಸ್‌ಸಿ-ಎಸ್‌ಟಿ ಫಲಾನುಭವಿಗಳಿಗೆ ಅಡುಗೆ ಅನಿಲ ವಿತರಿಸುವ ಯೋಜನೆಯಡಿ ರೂ.೨೦ಲಕ್ಷ ದುರುಪಯೋಗವಾಗಿರುವ ಸಂಶಯವಿದ್ದು, ಹಣ ದುರುಪಯೋಗ ಮಾಡಿಕೊಂಡವರ ವಿರುದ್ಧ ಅಟ್ರಾಸಿಟಿ ಕಾಯ್ದೆಯಡಿ ಮೊಕದ್ದಮೆ ದಾಖಲಿಸಬೇಕು ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡ ಹಿತರಕ್ಷಣಾ ಸಮಿತಿ ನಾಮನಿರ್ದೇಶನ ಸದಸ್ಯ ಬಿ.ಇ. ಜಯೇಂದ್ರ ಒತ್ತಾಯಿಸಿದರು.

ತಹಶೀಲ್ದಾರ್ ಗೋವಿಂದರಾಜು ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಹಿತರಕ್ಷಣಾ ಸಮಿತಿಯ ತ್ರೆöÊಮಾಸಿಕ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಕಳೆದ ಒಂದು ವರ್ಷದಿಂದ ಸಂಬAಧಪಟ್ಟ ಅಧಿಕಾರಿಗಳು ಸೂಕ್ತ ಮಾಹಿತಿ ನೀಡದೆ, ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಅರಣ್ಯ ಇಲಾಖೆಯಿಂದ ೨೦೧೮-೧೯ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿ ಎಸ್.ಸಿ.ಎಸ್.ಟಿ ಫಲಾನುಭವಿಗಳಿಗೆ ಅಡುಗೆ ಅನಿಲ ವಿತರಿಸಲು ೪೧,೨೬,೨೯೦ ರೂ. ಹಣವನ್ನು ಸರ್ಕಾರ ಜಿಲ್ಲೆಗೆ ಬಿಡುಗಡೆಗೊಳಿಸಿತ್ತು. ಪರಿಶಿಷ್ಟ ಜಾತಿಯ ೧೬೧, ಪರಿಶಿಷ್ಟ ಪಂಗಡದ ೨೬೦ ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ವೀರಾಜಪೇಟೆಯ ಗ್ಯಾಸ್ ಏಜೆನ್ಸಿಯೊಂದು ಟೆಂಡರ್ ಪಡೆದುಕೊಂಡು, ಕೆಲ ಮಂದಿಗೆ ೨೦ಲಕ್ಷ ರೂ., ಮೌಲ್ಯದ ಅಡುಗೆ ಅನಿಲ ಮಾತ್ರ ವಿತರಿಸಿದೆ. ಉಳಿದ ೨೦ ಲಕ್ಷ ರೂ.ಗಳ ವಿವರ ನೀಡುವಂತೆ ಕಳೆದ ಒಂದು ವರ್ಷದ ಹಿಂದೆಯೇ ಸಭೆಯಲ್ಲಿ ಒತ್ತಾಯಿಸಲಾಗಿದೆ. ಅಲ್ಲಿಂದ ಮೂರು ಸಭೆಗಳು ನಡೆದಿದ್ದರೂ ಮಾಹಿತಿ ನೀಡಿಲ್ಲ ಎಂದು ದೂರಿದರು.

ಸೋಮವಾರಪೇಟೆ, ಶನಿವಾರಸಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಿನ ಸಭೆಯಲ್ಲಿ ಲಿಖಿತ ಮಾಹಿತಿ ನೀಡದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಲು ಶಿಫಾರಸ್ಸು ಮಾಡಲಾಗುವುದು ಎಂದು ತಹಶೀಲ್ದಾರ್ ಹೇಳಿದರು.

ಸೋಮವಾರಪೇಟೆ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ವಿಳಂಬವಾಗಿರುವ ಬಗ್ಗೆ ಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ೧೫ ದಿನಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಿ, ಸಮಾಜಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಇಂಜಿನಿಯರಿAಗ್ ವಿಭಾಗದ ಎಇಇ ವೀರೇಂದ್ರ ಕುಮಾರ್ ಭರವಸೆ ನೀಡಿದರು.

ಎಸ್.ಸಿ.ಎಸ್.ಟಿ. ಫಲಾನುಭವಿ ಗಳಿಗೆ ಭೂ ಮಂಜೂರಾತಿಗೆ ಸಂಬAಧಪಟ್ಟAತೆ ದುರಸ್ತಿ ಮಾಡಿಕೊಡದೆ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪ ಸಭೆಯಲ್ಲಿ ಕೇಳಿಬಂತು. ಈಗ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ಮಾಡಿ ಸರ್ವೆ ಕೈಗೊಂಡು ಸೂಕ್ತ ದಾಖಲಾತಿಯನ್ನು ಒದಗಿಸಬೇಕು ಎಂದು ಸರ್ವೆ ಇಲಾಖೆಯ ಸೂಪರ್‌ವೈಸರ್ ಅವರಿಗೆ ತಹಶೀಲ್ದಾರರು ಸೂಚಿಸಿದರು.

ಸ್ಮಶಾನ ಹಾಗೂ ಕಸವಿಲೇವಾರಿ ಘಟಕಕ್ಕೆ ಜಾಗ ಮೀಸಲಿಡಲು ಸರ್ವೇ ಇಲಾಖೆ ಹೆಚ್ಚಿನ ಆಸಕ್ತಿ ವಹಿಸಬೇಕು. ವಿಳಂಬ ಧೋರಣೆಯಿಂದ ದೊಡ್ಡ ಮಟ್ಟದ ಸಮಸ್ಯೆ ಎದುರಾಗಲಿದೆ ಎಂದು ಸರ್ವೆ ಇಲಾಖೆಯ ಅಧಿಕಾರಿಗೆ ತಹಶೀಲ್ದಾರ್ ಗೋವಿಂದರಾಜು ಸೂಚಿಸಿದರು. ಸಭೆಯಲ್ಲಿ ಸಮಿತಿಯ ನಾಮನಿರ್ದೇಶನ ಸದಸ್ಯರಾದ ಸುಬ್ರಮಣಿ, ಸುಮತಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ. ಪಾಂಡು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.