ಕುಶಾಲನಗರ, ಅ. ೨೭: ಸೋಮವಾರಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮತ್ತು ಉಪ ಮಾರುಕಟ್ಟೆ ಪ್ರಾಂಗಣಗಳಲ್ಲಿ ನಿರ್ಮಾಣಗೊಂಡಿರುವ ಸಣ್ಣ ಅಂಗಡಿ ಮಳಿಗೆಗಳು, ಗೋದಾಮುಗಳ ಟೆಂಡರ್ ಪ್ರಕ್ರಿಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಬಿಜೆಪಿ ಬೆಂಬಲಿತ ಸದಸ್ಯರು ಸಭೆ ಬಹಿಷ್ಕರಿಸಿ ಹೊರನಡೆದ ಘಟನೆ ನಡೆಯಿತು.
ಟೆಂಡರ್ ಪ್ರಕ್ರಿಯೆ ಸಮರ್ಪಕ ವಾಗಿ ನಡೆದಿಲ್ಲ ಎಂದು ಆರೋಪಿಸಿ ಸಭೆಯಿಂದ ಹೊರ ನಡೆದಿರುವುದಾಗಿ ಆಡಳಿತ ಮಂಡಳಿಯ ೮ ಮಂದಿ ಸದಸ್ಯರುಗಳು ತಿಳಿಸಿದ್ದಾರೆ. ಕುಶಾಲನಗರ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಹೊಸದಾಗಿ ನಿರ್ಮಿಸಿದ ೪ ಅಂಗಡಿ ಮಳಿಗೆ, ಸೋಮವಾರಪೇಟೆ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ನಿರ್ಮಿಸಿದ ೩ ಅಂಗಡಿ ಮಳಿಗೆ ಮತ್ತು ಕುಶಾಲನಗರದಲ್ಲಿ ನಿರ್ಮಾಣಗೊಂಡಿರುವ ೨ ಗೋದಾಮುಗಳನ್ನು ಲೀವ್ ಆಂಡ್ ಲೈಸನ್ಸ್ ಶುಲ್ಕದ ಆಧಾರದ ಮೇಲೆ ಹಂಚಿಕೆ ಮಾಡಲು ಟೆಂಡರ್ ಕರೆಯಲಾಗಿತ್ತು.
ಟೆಂಡರ್ ಕ್ರಮದ ಬಗ್ಗೆ ತಮಗೆ ಸಭೆಯಲ್ಲಿ ಸಮರ್ಪಕ ಮಾಹಿತಿ ಒದಗಿಸಿಲ್ಲ ಎಂದು ದೂರಿರುವ ಸದಸ್ಯರು ಸಭೆಯಿಂದ ಹೊರ ನಡೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆಡಳಿತ ಮಂಡಳಿ ಸದಸ್ಯರಾದ ಎಂ.ಬಿ. ಮೊಣ್ಣಪ್ಪ, ಜಿ.ಜಿ. ಸತೀಶ್ ಮತ್ತು ಬಿ.ಎ. ಮೊಣ್ಣಪ್ಪ, ಅಧಿಕಾರಿಗಳು ಟೆಂಡರ್ ಪ್ರಕ್ರಿಯೆ ನಿಯಮಗಳನ್ನು ಹಿಂದಿನ ಸಭೆಯಲ್ಲಿ ತಮಗೆ ತಿಳಿಸದೇ ಇದ್ದ ಕಾರಣ ತಾವುಗಳು ಸಭೆಯಿಂದ ಬಹಿಷ್ಕರಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಮಿತಿಯ ವರ್ತಕರ ಪ್ರತಿನಿಧಿ ಶಶಿ ಭೀಮಯ್ಯ, ಇದೊಂದು ರಾಜಕೀಯ ದುರುದ್ದೇಶ ಪೂರಿತ ಆರೋಪವಾಗಿದೆ. ಟೆಂಡರ್ ಪ್ರಕ್ರಿಯೆ ನಿಯಮಾನುಸಾರ ನಡೆಯುತ್ತಿದೆ, ೧೫ ಮಂದಿ ಆಡಳಿತ ಸದಸ್ಯರಿಗೆ ಎಲ್ಲಾ ವಿಷಯಗಳನ್ನು ಹಿಂದಿನ ಸಭೆಯಲ್ಲಿ ಮಾಹಿತಿ ಒದಗಿಸ ಲಾಗಿದೆ ಎಂದು ದಾಖಲೆ ಸಹಿತ ತಿಳಿಸಿದ್ದಾರೆ. ೧೦೩ ಲೈಸೆನ್ಸ್ ದಾರರಿಗೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿತ್ತು. ಕೇವಲ ೭ ಮಂದಿ ಮಾತ್ರ ಟೆಂಡರ್ ನಲ್ಲಿ ಪಾಲ್ಗೊಂಡಿರು ವುದಾಗಿ ಅವರು ಮಾಹಿತಿ ನೀಡಿದರು.
ಸಮಿತಿಯಲ್ಲಿ ನೋಂದಾವಣೆ ಗೊಂಡ ವ್ಯಾಪಾರಸ್ಥರು ಮಾತ್ರ ಈ ಟೆಂಡರ್ ನಲ್ಲಿ ಪಾಲ್ಗೊಳ್ಳಬಹುದೆಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾದ ಎಂ.ಡಿ. ರಮೇಶ್ ಸ್ಪಷ್ಟಪಡಿಸಿದ್ದಾರೆ. ಯಾವುದೇ ರೀತಿಯ ನಿಯಮ ಬಾಹಿರ ಕೆಲಸ ನಡೆದಿಲ್ಲ ಎಂದು ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದು ಟೆಂಡರ್ ಪ್ರಕ್ರಿಯೆ ಸಂದರ್ಭ ಸಭೆಯಲ್ಲಿ ಸದಸ್ಯರ ಕೋರಂ ಕೊರತೆ ಯಿಂದ ಟೆಂಡರ್ ಪ್ರಕ್ರಿಯೆಯನ್ನು ಮುಂದೂಡಿರುವುದಾಗಿ ಮಾಹಿತಿ ನೀಡಿದ್ದಾರೆ.