ಸೋಮವಾರಪೇಟೆ, ಅ. ೨೬: ವಿಶ್ವವನ್ನೇ ತಲ್ಲಣಗೊಳಿಸಿದ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತ ಹೊಸ ಮೈಲಿಗಲ್ಲು ಸಾಧಿಸಿದ್ದು, ದೇಶದಲ್ಲಿ ೧೦೦ ಕೋಟಿ ಉಚಿತ ಲಸಿಕೆ ನೀಡುವ ಮೂಲಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಮೋಘ ಸಾಧನೆ ಮಾಡಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.

ಭಾರತೀಯ ಜನತಾ ಪಾರ್ಟಿಯ ಸೋಮವಾರಪೇಟೆ ಎಸ್.ಸಿ. ಮೋರ್ಚಾ ವತಿಯಿಂದ ಗಣಗೂರು ಗ್ರಾ.ಪಂ. ವ್ಯಾಪ್ತಿಯ ಗೋಣಿಮರೂರು ಶ್ರೀಬಸವೇಶ್ವರ ದೇವಾಲಯ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕೊರೊನಾ ವಾರಿಯರ್ಸ್ಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿರೋಧ ಪಕ್ಷಗಳ ಕಟು ಟೀಕೆಗಳ ನಡುವೆಯೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ೧೦೦ ಕೋಟಿ ಉಚಿತ ಲಸಿಕೆ ನೀಡಿದೆ. ಆರಂಭದಲ್ಲಿ ಭಾರತೀಯ ವೈದ್ಯರುಗಳೇ ಸಂಶೋಧಿಸಿ ತಯಾರಿಸಿದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಯ ಬಗ್ಗೆ ವಿಪಕ್ಷಗಳು ಇಲ್ಲಸಲ್ಲದ ಟೀಕೆಗಳನ್ನು ಮಾಡಿದವು. ನಂತರದ ದಿನಗಳಲ್ಲಿ ಅವರುಗಳೇ ತಮಗೆ ವ್ಯಾಕ್ಸಿನ್ ಲಭಿಸಿಲ್ಲ ಎಂದು ಆರೋಪಿಸಿದರು. ದೇಶವಾಸಿಗಳ ಆರೋಗ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರ ಶಕ್ತಿಮೀರಿ ಕೊರೊನಾ ನಿಗ್ರಹಕ್ಕೆ ಶ್ರಮಿಸಿದೆ ಎಂದು ರಂಜನ್ ಅಭಿಪ್ರಾಯಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಪ್ರಭಾರಿ ಬಿ.ಬಿ. ಭಾರತೀಶ್, ಭಾರತದ ಲಸಿಕೆ ಕೇವಲ ಭಾರತ ಮಾತ್ರವಲ್ಲದೇ ವಿಶ್ವದ ಕೋಟ್ಯಾಂತರ ಮಂದಿಯ ಜೀವ ಉಳಿಸಿದೆ. ಬೃಹತ್ ಪ್ರಮಾಣದ ಲಸಿಕೆ ಅಭಿಯಾನ ದೇಶದಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಗಟ್ಟಿ ನಾಯಕತ್ವ ನೀಡಿದ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರ ಎಲ್ಲಾ ರೀತಿಯಲ್ಲೂ ಭಾರತೀಯರ ನೆರವಿಗೆ ನಿಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಅಸಂಘಟಿತ ವಲಯದ ಅಧ್ಯಕ್ಷ ವಿ.ಎಂ. ವಿಜಯ ಮಾತನಾಡಿ, ಹಲವಷ್ಟು ಅಪಪ್ರಚಾರದ ನಡುವೆಯೂ ಲಸಿಕಾ ಅಭಿಯಾನ ಯಶಸ್ವಿಯಾಗುತ್ತಿದೆ. ಇದಕ್ಕೆ ಅಂಗನವಾಡಿ, ಆಶಾ ಕಾರ್ಯಕರ್ತ ರೊಂದಿಗೆ ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿಗಳ ಶ್ರಮ ಅಪಾರ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ ಮಾತನಾಡಿ, ಕೋವಿಡ್ ಸಂದರ್ಭ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸೇವಾ ಕಾರ್ಯ ನಡೆಸಿದ್ದಾರೆ. ಸೋಮವಾರಪೇಟೆ ವ್ಯಾಪ್ತಿಯಲ್ಲಿ ೩ ಆಂಬ್ಯುಲೆನ್ಸ್ಗಳನ್ನು ಉಚಿತವಾಗಿ ನೀಡಲಾಗಿದೆ. ಆಸ್ಪತ್ರೆಗೆ ಆಗಮಿಸುವ ಮಂದಿಗೆ ೨ ತಿಂಗಳ ಕಾಲ ಮಧ್ಯಾಹ್ನ ಉಚಿತ ಊಟ ನೀಡಲಾಗಿದೆ. ಕೊರೊನಾದಿಂದ ಮೃತರಾದವರ ಅಂತ್ಯಸAಸ್ಕಾರ ನೆರವೇರಿಸಲಾಗಿದೆ. ಇದರೊಂದಿಗೆ ರಕ್ತದಾನ, ಸ್ವಚ್ಛತಾ ಕಾರ್ಯ, ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸೇವಾ ಹೀ ಸಂಘಟನ್ ಘೋಷಣೆಯಲ್ಲಿ ಕಾರ್ಯಕರ್ತರು ಕೆಲಸ ಮಾಡಿದ್ದಾರೆ ಎಂದು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಎಸ್‌ಸಿ ಮೋರ್ಚಾ ಮಂಡಲ ಅಧ್ಯಕ್ಷ ಹೆಚ್.ಸಿ. ರಾಮಕೃಷ್ಣ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಎಸ್.ಎ. ಪ್ರತಾಪ್, ಬಿಜೆಪಿ ತಾಲೂಕು ಉಪಾಧ್ಯಕ್ಷೆ ಜ್ಯೋತಿ ಶಿವಣ್ಣ, ಪ.ಪಂ. ಅಧ್ಯಕ್ಷ ಪಿ.ಕೆ. ಚಂದ್ರು, ಹಿಂದುಳಿದ ಮೋರ್ಚಾ ಅಧ್ಯಕ್ಷ ಗಂಗಾಧರ್, ರೈತಮೋರ್ಚಾ ಅಧ್ಯಕ್ಷ ಜಗದೀಶ್, ಬಿಜೆಪಿ ನಗರಾಧ್ಯಕ್ಷ ಸೋಮೇಶ್, ಗ್ರಾ.ಪಂ. ಉಪಾಧ್ಯಕ್ಷರಾದ ದಮಯಂತಿ, ಸದಸ್ಯರುಗಳಾದ ಪ್ರೇಮಾ, ಜ್ಯೋತಿ, ಗೌರಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಆಲೂರುಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಪರ್ಣ ಕೃಷ್ಣಾನಂದ್ ಸೇರಿದಂತೆ ಶುಶ್ರೂಷಕಿಯರು, ನೇರುಗಳಲೆ, ಗಣಗೂರು, ಆಲೂರುಸಿದ್ದಾಪುರ ವ್ಯಾಪ್ತಿಯ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸ್ವಯಂಸೇವಾ ಸಂಘಟನೆಗಳ ಕಾರ್ಯಕರ್ತರು, ಆಂಬ್ಯುಲೆನ್ಸ್ ಚಾಲಕರು ಹಾಗೂ ಸಿಬ್ಬಂದಿಗಳು, ಆರೋಗ್ಯ ಇಲಾಖಾ ಸಿಬ್ಬಂದಿಗಳು ಸೇರಿದಂತೆ ೫೦ಕ್ಕೂ ಅಧಿಕ ಕೊರೊನಾ ವಾರಿಯರ್ಸ್ ಗಳನ್ನು ಸನ್ಮಾನಿಸಲಾಯಿತು.